ಬೆಂಗಳೂರು, ಸೆ.20: ಕಾಂಗ್ರೆಸ್ ಸರ್ಕಾರ ಸಾಫ್ಟ್‌ವೇರ್ ಹೆಸರಿನಲ್ಲಿ ಬೆಂಗಳೂರಿನ ನಾಗರಿಕರ ಜೇಬಿಗೆ ಕೈ ಹಾಕುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಎಟಿಎಂ ಆಗಿದೆ’ ಎಂದು ಕಿಡಿಕಾರಿದ್ದಾರೆ. ‘ಸುಲಿಗೆಯಲ್ಲಿ ಈ ಸರ್ಕಾರ 50 ವರ್ಷಗಳ ದಾಖಲೆ ಸರಿಗಟ್ಟಲಿದೆ. ಸೇವೆಗೆ ₹10,000 ವರೆಗೆ ಶುಲ್ಕ ವಿಧಿಸುವುದು ಪಿಕ್‌ಪಾಕೆಟ್ ಅಲ್ಲದೆ ಮತ್ತೇನು?’ ಎಂದು ಅವರು ಪ್ರಶ್ನಿಸಿದ್ದಾರೆ.
‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಂದ ಮೇಲೆ ಬೆಂಗಳೂರು ಗ್ರೇಟ್ ಆಗುತ್ತದೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ಮಹಾನಗರದ ವ್ಯಾಪ್ತಿ ಹಿಗ್ಗಿಸಿದರೆ ಅಭಿವೃದ್ಧಿಗೆ ಅನುಕೂಲ. 50 ವರ್ಷಗಳಲ್ಲಿ ಯಾರೂ ಮಾಡದ ಕೆಲಸವನ್ನು ನಾವು ಮಾಡುತ್ತಿದ್ದೇವೆ’ ಎಂದು ಹೇಳಿದ್ದನ್ನು ಉಲ್ಲೇಖಿಸಿರುವ ಕುಮಾರಸ್ವಾಮಿ, ‘ನಿಮ್ಮ ಆಸ್ತಿ, ನಿಮ್ಮ ಹಕ್ಕು. ನಿಮ್ಮ ಮನೆ ಬಾಗಿಲಿಗೇ ದಾಖಲೆಗಳನ್ನು ತಲುಪಿಸುತ್ತೇವೆ. ಸುಳ್ಳು ಹೇಳುವುದಕ್ಕೆ ಸಂಕೋಚವಿಲ್ಲ, ಸುಲಿಗೆಗೆ ನಾಚಿಕೆಯೂ ಇಲ್ಲ’ ಎಂದು ಟೀಕಿಸಿದ್ದಾರೆ. ‘ಬೆಂಗಳೂರು ವ್ಯಾಪ್ತಿ ಹಿಗ್ಗಿಸುವುದು ಎಂದರೆ ಸುಲಿಗೆಗೆ ವ್ಯಾಪಕ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು. ರಾಜ್ಯ ಕಾಂಗ್ರೆಸ್ ಸರ್ಕಾರ ಅದನ್ನೇ ಮಾಡಿದೆ’ ಎಂದು ಅವರು ಆರೋಪಿಸಿದ್ದಾರೆ.
