Tuesday, November 26, 2024
Homeರಾಜ್ಯಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಜಾಹಿರಾತುಗಳಿಗೆ ಪೂರ್ವಾನುಮತಿ ಕಡ್ಡಾಯ

ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಜಾಹಿರಾತುಗಳಿಗೆ ಪೂರ್ವಾನುಮತಿ ಕಡ್ಡಾಯ

ಬೆಂಗಳೂರು,ಮಾ.20- ಪ್ರಸ್ತುತ ಲೋಕಸಭೆ ಚುನಾವಣೆ ನೀತಿ ಸಂಹಿತೆ ಮಾ.16ರಿಂದ ದೇಶಾದ್ಯಂತ ಜಾರಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ರಾಜಕೀಯ ಜಾಹಿರಾತುಗಳಿಗೆ ಚುನಾವಣಾ ಆಯೋಗದ ಪೂರ್ವಾನುಮತಿ ಅಗತ್ಯ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್‍ಕುಮಾರ್ ಮೀನಾ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಲೋಕಸಭೆ ಚುನಾವಣೆ 2024ರ ಅಂಗವಾಗಿ ಚುನಾವಣೆ ಸಮಯದಲ್ಲಿ ಮಾಧ್ಯಮ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮತದಾನ ಪ್ರಾರಂಭವಾಗುವ 48 ಗಂಟೆಗೂ ಮುನ್ನ ಸಮೀಕ್ಷೆ ಮಾಡುವಂತಿಲ್ಲ. ಮುದ್ರಣ ಮಾಧ್ಯಮಗಳು ಆ ಸಂದರ್ಭದಲ್ಲಿ ಪ್ರಕಟಿಸುವ ಜಾಹಿರಾತುಗಳಿಗೆ ಆಯೋಗದ ಪೂರ್ವಾನುಮತಿ ಪಡೆಯಬೇಕು. ದೃಶ್ಯ ಮಾಧ್ಯಮಗಳು ಕೂಡ ಪ್ರಕಟಿಸುವ ಜಾಹಿರಾತಿಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.

ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರವು ಪ್ರಮುಖವಾಗಿದೆ. ಎಂಸಿಎಂಸಿ ಸಮಿತಿಯ ಅನುಮತಿ ಪಡೆಯಬೇಕು. ಗುರುತಿಸಲ್ಪಟ್ಟ ಅಗತ್ಯ ಸೇವೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗಿದ್ದು, ನೋಡೆಲ್ ಅಧಿಕಾರಿಗಳನ್ನು ಅದಕ್ಕಾಗಿ ನೇಮಿಸಲಾಗಿದೆ ಎಂದು ಹೇಳಿದರು.

ಮತಗಟ್ಟೆ ಸಮೀಕ್ಷೆ ಇಲ್ಲ:
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದಿಂದ ಕೊನೆಯ ಹಂತದ ಮತದಾನ ಮುಗಿಯುವವರೆಗೂ ಮತಗಟ್ಟೆ ಅಭಿಪ್ರಾಯ ಸಂಗ್ರಹ ಅಥವಾ ಸಮೀಕ್ಷೆ ಮಾಹಿತಿಯನ್ನು ಪ್ರಕಟಿಸುವಂತಿಲ್ಲ ಎಂದು ರಾಜ್ಯ ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ತಿಳಿಸಿದರು. ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹ ಮಾಡಲು ಅವಕಾಶವಿಲ್ಲ. ಹಾಗೊಂದು ವೇಳೆ ಮಾಡಿದರೆ ಅಪರಾಧವಾಗಲಿದೆ. ಒಬ್ಬರೇ ಅಭ್ಯರ್ಥಿ ಪರವಾಗಿ ಸುದ್ದಿ ಪ್ರಕಟಿಸಿದರೆ ಅದು ಪಾವತಿ ಸುದ್ದಿಯಾಗುತ್ತದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಎರಡೂವರೆ ಸಾವಿರ ಪ್ರಕರಣಗಳು ದಾಖಲಾಗಿದ್ದವು ಎಂದರು.

ಬರ ಪರಿಹಾರ ಕಾರ್ಯಗಳಿಗೆ ಅಡ್ಡಿ ಇಲ್ಲ:
ಈಗಾಗಲೇ ರಾಜ್ಯದಲ್ಲಿ ಘೋಷಣೆಯಾಗಿರುವ ಬರಪೀಡಿತ ತಾಲ್ಲೂಕುಗಳಲ್ಲಿ ಬೋರ್‍ವೆಲ್ ಕೊರೆಸುವುದು, ನೀರು ಪೂರೈಕೆಯಂತಹ ತುರ್ತು ಕಾರ್ಯಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದ ಸಭೆಯ ಹೊರತು ಬೇರೆ ರೀತಿಯ ಸಭೆಗಳನ್ನು ಮುಖ್ಯಮಂತ್ರಿಗಳು, ಸಚಿವರು ಮಾಡುವಂತಿಲ್ಲ. ಒಂದು ವೇಳೆ ಅಗತ್ಯಬಿದ್ದರೆ ಮುಖ್ಯ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು.

ಸಾರ್ವಜನಿಕ ರ್ಯಾಲಿಗಳಲ್ಲಿ ವಾಹನಗಳ ಮಿತಿಯನ್ನು 10ಕ್ಕೆ ನಿಗದಿಗೊಳಿಸಲಾಗಿದೆ. ಜಾಹಿರಾತು ಪ್ರಕಟಣೆಗೆ ಆಯೋಗದ ಪೂರ್ವ ಪ್ರಮಾಣಿಕರಣವಾಗಬೇಕು ಎಂದು ಹೇಳಿದರು. ಈಗಾಗಲೇ ರಾಜಕೀಯ ಪಕ್ಷಗಳಿಗೂ ನೀತಿ ಸಂಹಿತೆ ಪಾಲನೆ ಮಾಡಲು ಸೂಚನೆ ನೀಡಲಾಗಿದೆ ಎಂದರು.

ರಾಜ್ಯ ಅಪರ ಮುಖ್ಯ ಚುನಾವಣಾಧಿಕಾರಿ ಕೂರ್ಮ ರಾವ್ ಮಾತನಾಡಿ, ಚುನಾವಣಾ ಆಯೋಗ ನಿಗದಿಪಡಿಸಿರುವ ಅತ್ಯವಶ್ಯಕ 16 ಸೇವೆಗಳಲ್ಲಿ ಮಾಧ್ಯಮದವರು ಬರುತ್ತಾರೆ. ಇಡೀ ದಿನ ಚುನಾವಣಾ ಕಾರ್ಯಕ್ಕೆ ನಿಯೋಜನೆಯಾದವರು ನಮೂನೆ 12ಡಿ ಬಳಕೆ ಮಾಡಬೇಕು. ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಂಥವರಿಗೆ ಅಂಚೆ ಮತದಾನ ಕೇಂದ್ರದಲ್ಲಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.

ವಿಶೇಷ ಅಧಿಕಾರಿ(ಐಟಿ ಮತ್ತು ಮಾಧ್ಯಮ) ಎ.ವಿ.ಸೂರ್ಯಸೇನ ಮಾತನಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಮಾಹಿತಿ ಪರಿಶೀಲನೆಗೆ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸೋಶಿಯಲ್ ಮೀಡಿಯ ನಿರ್ವಹಣಾ ಸಮಿತಿ ರಚನೆ ಮಾಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ. ಅಭ್ಯರ್ಥಿ ಹಾಗೂ ಪಕ್ಷದ ವೈಯಕ್ತಿಕ ಖಾತೆಯಲ್ಲಿ ವೈಯಕ್ತಿಕ ವಿಚಾರ ಪ್ರಕಟಿಸಿದರೆ ಚುನಾವಣಾ ವೆಚ್ಚಕ್ಕೆ ಪರಿಗಣಿಸಲಾಗುವುದಿಲ್ಲ.

ಆದರೆ ಪ್ರಾಯೋಜಿತವಾಗಿದ್ದರೆ ಅದು ಚುನಾವಣಾ ವೆಚ್ಚಕ್ಕೆ ಸೇರ್ಪಡೆಯಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ಮಾಹಿತಿಯನ್ನು ಟ್ರಾಕ್ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಜಂಟಿ ನಿರ್ದೇಶಕ ಮಂಜುನಾಥ್ ದೊಳ್ಳಿನ, ಹಿರಿಯ ಪತ್ರಕರ್ತ ಈಶ್ವರ್ ದೈತೋಟ ಉಪಸ್ಥಿತರಿದ್ದರು.

RELATED ARTICLES

Latest News