Sunday, May 19, 2024
Homeರಾಜ್ಯಬಾಕಿ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಸರಣಿ ಸಭೆ

ಬಾಕಿ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಸರಣಿ ಸಭೆ

ಬೆಂಗಳೂರು,ಮಾ.20- ಲೋಕಸಭಾ ಚುನಾವಣೆಗೆ ಬಾಕಿ ಇರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ಇಂದೂ ಕೂಡ ಕಾಂಗ್ರೆಸ್ ನಾಯಕರು ಸರಣಿ ಸಭೆಗಳನ್ನು ಮುಂದುವರೆಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿಯೇ ಬೀಡುಬಿಟ್ಟಿದ್ದು, ವರಿಷ್ಠರ ಜೊತೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದಾರೆ.

ಈಗಾಗಲೇ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಬಾಕಿ ಇರುವ 21 ಕ್ಷೇತ್ರಗಳ ಪೈಕಿ ನಿನ್ನೆ ಮೊದಲ ಸುತ್ತಿನ ಸಭೆಯಲ್ಲಿ 16 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಆಖೈರುಗೊಂಡಿದೆ. ಬಾಕಿ ಉಳಿದ 5 ಕ್ಷೇತ್ರಗಳು ಕಗ್ಗಂಟಾಗಿದ್ದು, ಅವುಗಳನ್ನು ಇತ್ಯರ್ಥಪಡಿಸಲು ಹರಸಾಹಸ ನಡೆಸಲಾಗುತ್ತಿದೆ.

ಕಲಬುರಗಿ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ ಕ್ಷೇತ್ರಗಳಿಗೆ ತೀವ್ರ ಗೊಂದಲ ಉಂಟಾಗಿದೆ. ಹೀಗಾಗಿ ಮುಖ್ಯಮಂತ್ರಿಯವರೊಂದಿಗೆ ಹೈಕಮಾಂಡ್ ಪದೇಪದೇ ಚರ್ಚೆಗಳನ್ನು ನಡೆಸುತ್ತಿದೆ. ಸಂಜೆ ನಡೆಯುವ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಒಮ್ಮೆಲೇ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.

ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಲಕ್ಷ್ಮಣ್, ರಾಯಚೂರಿಗೆ ಕುಮಾರ್‍ನಾಯಕ್, ಕೊಪ್ಪಳಕ್ಕೆ ರಾಜಶೇಖರ್ ಹಿಟ್ನಾಳ್, ಬೀದರ್‍ಗೆ ರಾಜಶೇಖರ್ ಪಾಟೀಲ್, ದಾವಣಗೆರೆಗೆ ಪ್ರಭಾ ಮಲ್ಲಿಕಾರ್ಜುನ್, ಚಿತ್ರದುರ್ಗಕ್ಕೆ ಚಂದ್ರಪ್ಪ, ಧಾರವಾಡಕ್ಕೆ ವಿನೋದ್ ಅಸೋಟಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ, ಬೆಳಗಾವಿಗೆ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಗೆ ಪ್ರಿಯಾಂಕ ಜಾರಕಿಹೊಳಿ, ಉತ್ತರ ಕನ್ನಡಕ್ಕೆ ಅಂಜಲಿ ನಿಂಬಾಳ್ಕರ್, ಬೆಂಗಳೂರು ಕೇಂದ್ರಕ್ಕೆ ಮನ್ಸೂರ್ ಆಲಿಖಾನ್, ಬೆಂಗಳೂರು ದಕ್ಷಿಣಕ್ಕೆ ಸೌಮ್ಯರೆಡ್ಡಿ ಸ್ರ್ಪಧಿಸುವುದು ಖಚಿತವಾಗಿದೆ.

ದಕ್ಷಿಣ ಕನ್ನಡಕ್ಕೆ ಪದ್ಮರಾಜ್‍ರ ಹೆಸರು ಬಹುತೇಕ ಆಖೈರುಗೊಂಡಿದ್ದರೂ ವಿನಯ್‍ಕುಮಾರ್ ಸೊರಕೆ ಅವರ ಪರವಾಗಿ ಕೆಲವು ನಾಯಕರು ಲಾಬಿ ನಡೆಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರನ್ನು ಕಡೆಗಣಿಸಿ, ಸಚಿವ ಶಿವಾನಂದ ಪಾಟೀಲ್‍ರ ಪುತ್ರಿ ಸಂಯುಕ್ತ ಪಾಟೀಲರನ್ನು ಕಣಕ್ಕಿಳಿಸುವ ಚರ್ಚೆಗಳಾಗುತ್ತಿವೆ.

ಒಂದು ವೇಳೆ ವೀಣಾ ಕಾಶಪ್ಪನವರಿಗೆ ಟಿಕೆಟ್ ತಪ್ಪಿದರೆ, ಪಂಚಮಸಾಲಿ ಸಮುದಾಯದ ರಾಜ್ಯಾಧ್ಯಕ್ಷರೂ ಹಾಗೂ ಶಾಸಕರೂ ಆಗಿರುವ ವಿಜಯಾನಂದ ಕಾಶಪ್ಪನವರು ಅಸಮಾಧಾನಗೊಳ್ಳಲಿದ್ದು, ಸಹಜವಾಗಿ ಸಮುದಾಯದ ಅಸಮಾಧಾನಕ್ಕೆ ಕಾರಣವಾಗುವ ಆತಂಕ ಇದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಲಿಂಗಾಯತರ ಟ್ರಂಪ್‍ಕಾರ್ಡ್ ಅನ್ನು ಬಳಸಿ ಮತಗಳಿಕೆ ಮಾಡಿಕೊಂಡಿತ್ತು. ಸಮುದಾಯದ ಪ್ರಭಾವಿ ನಾಯಕರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಅವರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂಬ ವ್ಯಾಪಕ ಪ್ರಚಾರಗಳು ಕಾಂಗ್ರೆಸ್‍ಗೆ ಲಾಭ ತಂದುಕೊಟ್ಟಿದ್ದವು. ಈ ಬಾರಿ ಒಕ್ಕಲಿಗ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡುತ್ತಿದೆ ಎಂಬ ಪ್ರಚಾರಗಳು ಆರಂಭವಾಗಿವೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಒಕ್ಕಲಿಗ ಸಮುದಾಯದ ನಾಯಕರಿಗೆ ಹೆಚ್ಚಿನ ಟಿಕೆಟ್ ನೀಡಿ ಮತ ಗಳಿಸುವ ಪ್ರಯತ್ನ ನಡೆಸುತ್ತಿದೆ.

ಬೆಂಗಳೂರು ಉತ್ತರ ಕ್ಷೇತ್ರದಿಂದ ಶಾಸಕ ಪ್ರಿಯಕೃಷ್ಣರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಬಯಸಿದ್ದಾರೆ. ಆದರೆ ಅವರು ಇದಕ್ಕೆ ಒಪ್ಪಲು ಸಿದ್ಧರಿಲ್ಲ. ಮತ್ತೊಬ್ಬ ಪ್ರಬಲ ಆಕಾಂಕ್ಷಿ ರಾಜೀವ್ ಗೌಡ ತಮಗೆ ಅವಕಾಶ ಕೊಟ್ಟರೆ ಗೆದ್ದು ಬರುವುದಾಗಿ ಪ್ರತಿಪಾದಿಸುತ್ತಿದ್ದಾರೆ.ಉಳಿದಂತೆ ಉಡುಪಿ, ಚಿಕ್ಕಮಗಳೂರು, ಮೈಸೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕಲು ನಿರ್ಧರಿಸಲಾಗಿದೆ.

ಈಗಾಗಲೇ ಘೋಷಿತ ಕ್ಷೇತ್ರಗಳ ಪೈಕಿ ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ.ಚಿತ್ರದುರ್ಗದಲ್ಲಿ ಎಂ.ಚಂದ್ರಪ್ಪ ಸ್ರ್ಪಸಲಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಬೇರೆಯವರ ಹೆಸರೂ ಚರ್ಚೆಯಲ್ಲಿದೆ. ಕಲಬುರಗಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ರ್ಪಧಿಸುವುದಿಲ್ಲ ಎಂದು ಅಭಿಪ್ರಾಯ ತಿಳಿಸಿದ್ದು, ಅವರ ಮನವೊಲಿಸುವ ಪ್ರಯತ್ನ ನಡೆದಿದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಅವರ ಅಳಿಯ ರಾಧಾಕೃಷ್ಣ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಕೋಲಾರಕ್ಕೆ ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಸಚಿವ ಕೆ.ಎಚ್.ಮುನಿಯಪ್ಪ ಹಠ ಹಿಡಿದಿದ್ದಾರೆ. ಇದರ ನಡುವೆ ರಾಜ್ಯಸಭೆಯ ಮಾಜಿ ಸದಸ್ಯ ಎಲ್.ಹನುಮಂತಯ್ಯ ಅವರ ಮಧ್ಯಪ್ರವೇಶವಾಗಿರುವುದು ಟಿಕೆಟ್ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗುವಂತೆ ಮಾಡಿದೆ.

ಬಳ್ಳಾರಿಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರನ್ನೇ ಮತ್ತೆ ಕಣಕ್ಕಿಳಿಸಬೇಕೆಂಬ ಒತ್ತಡಗಳಿವೆ. ಚಾಮರಾಜನಗರಕ್ಕೆ ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರ ಹೆಸರು ಅಂತಿಮಗೊಂಡಿದ್ದರೂ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಒಂದಿಷ್ಟು ಅಡ್ಡಗಾಲು ಎದುರಾಗಿದೆ.

ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡಬೇಕು ಎಂದು ಮುಖ್ಯಮಂತ್ರಿ ಪ್ರತಿಪಾದಿಸುತ್ತಿದ್ದರೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕ್ಷೇತ್ರ ಬಿಟ್ಟುಕೊಡಲು ನಿರಾಕರಿಸುತ್ತಿದ್ದಾರೆ.ಬೀದರ್‍ನಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಸಚಿವ ಈಶ್ವರ್ ಖಂಡ್ರೆ ಒತ್ತಾಯ ಮಾಡುತ್ತಿದ್ದಾರೆ.

RELATED ARTICLES

Latest News