ನವದೆಹಲಿ,ಮಾ.20- ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುವ ಸಲುವಾಗಿ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ. ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರ ಜೊತೆಗೆ ಒಂದು ಸುತ್ತಿನ ಚರ್ಚೆ ಆಗಿದೆ. ಮಾರ್ಚ್ 22ರಂದು ಪ್ರಧಾನಿ ಮೋದಿ ಜೊತೆಗೆ ಸಭೆ ನಡೆಯಲಿದ್ದು, ಅಂದೇ ಅಂತಿಮ ನಿರ್ಧಾರ ಆಗಲಿದೆ ಎಂದು ಹೇಳಿದ್ದಾರೆ.
ಯಲಹಂಕ ಶಾಸಕ ವಿಶ್ವನಾಥ್ ತಮ್ಮ ಮಗ ಅಲೋಕ್ ವಿಶ್ವನಾಥ್ ಮತ್ತು ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಈ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬೆಂಗಳೂರು ಉತ್ತರದಲ್ಲಿ ಟಿಕೆಟ್ ತಪ್ಪಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಈ ಕ್ಷೇತ್ರದಲ್ಲಿ ಟಿಕಟ್ ನೀಡುವ ಸಾಧ್ಯತೆ ಇದೆ ಎಂದು ಸುದ್ದಿಯಾಗಿತ್ತು.
ಈ ವೇಳೆ ಚಿಕ್ಕಬಳ್ಳಾಪುರ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಯಾರಿಗೆ ಕೊಟ್ಟರೂ ಸ್ಥಳೀಯರಿಗೇ ಟಿಕೆಟ್ ನೀಡಿ, ಹೊರಗಿನವರನ್ನು ಕರೆತರುವುದು ಬೇಡ ಎಂದು ಪರೋಕ್ಷವಾಗಿ ಸದಾನಂದ ಗೌಡ ಅವರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸುಮಲತಾ ಅಂಬರೀಷ್ ಅವರ ಹೆಸರು ಕೇಳಿ ಬಂದಿದೆ. ಆದರೆ ಮಂಡ್ಯ ಕ್ಷೇತ್ರಕ್ಕಾಗಿ ಪಟ್ಟು ಹಿಡಿದಿರುವ ಸುಮಲತಾ ಅವರು ಈ ಪ್ರಸ್ತಾಪಕ್ಕೆ ಒಪ್ಪಿದ್ದಾರಾ ಎಂಬ ಬಗ್ಗೆ ತಿಳಿದುಬಂದಿಲ್ಲ.