ನವದೆಹಲಿ, ಸೆ.5- ಉತ್ತರ ಭಾರತದಾದ್ಯಂತ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಪವಿತ್ರ ಗಂಗಾ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಉತ್ತರ ಪ್ರದೇಶ (ಯುಪಿ) ಮತ್ತು ಬಿಹಾರದ ನದಿ ಪಾತ್ರದ ನೂರಾರು ಗ್ರಾಮಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬಿಹಾರದ ಪಾಟ್ನಾ ಸೇರಿದಂತೆ ಗಾಂಧಿಘಾಟ್ ಹಾಗೂ ಹಥಿದಾಹ್ ಬಳಿ ಗಂಗಾ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಪ್ರವಾಹದ ಹಂತ ತಲುಪಿದೆ. ಪಾಟ್ನಾದ ಘಾಟ್‌ಗಳು ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನಗರದ ಶವಸಂಸ್ಕಾರ ಸ್ಥಳಗಳಿಗೂ ಪ್ರವಾಹದ ನೀರು ನುಗ್ಗಿರುವುದರಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಗಂಗಾ ಮತ್ತು ವರುಣಾ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶದ 11ಕ್ಕೂ ಹೆಚ್ಚು ವಾರ್ಡ್‌ಗಳು ಹಾಗೂ ನೂರಾರು ಕುಟುಂಬಗಳು ಪ್ರವಾಹದ ಸಂಕಷ್ಟಕ್ಕೆ ಸಿಲುಕಿವೆ.
ಬಿಹಾರದ ಬೇಗುಸರಾಯ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗಂಗಾ ನದಿಯ ರಭಸಕ್ಕೆ ತಡೆಗೋಡೆಗಳು ಮುರಿದುಬಿದ್ದಿದ್ದು, ಪ್ರವಾಹದ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ವೈಶಾಲಿ ಜಿಲ್ಲೆಯಲ್ಲೂ ಗಂಗಾ ಮತ್ತು ಗಂಡಕ್ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಒಂದು ಡಜನ್‌ಗೂ ಹೆಚ್ಚು ಗ್ರಾಮಗಳು ಪ್ರವಾಹದ ನೀರಿನಿಂದ ಸುತ್ತುವರಿದಿವೆ ಎಂದು ವರದಿಯಾಗಿದೆ.
ಹಲವು ನದಿಗಳು ಅಪಾಯದ ಮಟ್ಟದಲ್ಲಿ
ಬಿಹಾರದಲ್ಲಿ ಗಂಗಾ ಸೇರಿದಂತೆ ಗಂಡಕ್, ಕೋಸಿ, ಬೂಢಿ ಗಂಡಕ್, ಪುನ್ಪುನ್ ಹಾಗೂ ಘಾಘ್ರಾ ನದಿಗಳ ಹಲವು ಮಾಪನ ಕೇಂದ್ರಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಮೇಲೆಯೇ ಹರಿಯುತ್ತಿದೆ. ಪಾಟ್ನಾ, ಭಾಗಲ್ಪುರ, ಮುಂಗೇರ್ ಮತ್ತು ವೈಶಾಲಿ ಸೇರಿದಂತೆ ಹಲವು ಜಿಲ್ಲೆಗಳು ಹೆಚ್ಚಿನ ಅಪಾಯದಲ್ಲಿವೆ.ನೇಪಾಳದ ಜಲಾನಯನ ಪ್ರದೇಶಗಳು ಹಾಗೂ ಜಾರ್ಖಂಡ್‌ನ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಗಂಗಾ ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಕಳೆದ ವರ್ಷಗಳಲ್ಲೂ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಭಾರಿ ಮಳೆ ಹಾಗೂ ನೆರೆಯ ಪ್ರದೇಶಗಳಿಂದ ಹರಿದುಬಂದ ಹೆಚ್ಚುವರಿ ನೀರಿನಿಂದ ಗಂಡಕ್, ಕೋಸಿ ಮತ್ತು ಗಂಗಾ ನದಿಗಳು ತೀವ್ರ ಪ್ರವಾಹ ಸೃಷ್ಟಿಸಿದ್ದವು. ಈ ಹಿಂದಿನ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಆಡಳಿತ ಯಂತ್ರವು ಮುನ್ನೆಚ್ಚರಿಕೆ ಕ್ರಮಗಳನ್ನು ತೀವ್ರಗೊಳಿಸಿದೆ.
ರಾತ್ರಿ ಹಗಲು ನಿಗಾ
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಹತ್ತಾರು ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಎನ್‌ಡಿಆರ್‌ಎಫ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳನ್ನು ನಿಯೋಜಿಸಲಾಗಿದೆ.ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸುತ್ತಿದ್ದು, ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳಿಗೆ ತಡೆಗೋಡೆಗಳ ದುರಸ್ತಿ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಫರಕ್ಕಾ ಬ್ಯಾರೇಜ್ ಗೇಟ್ ತೆರವು
ಪ್ರವಾಹದ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ಫರಕ್ಕಾ ಬ್ಯಾರೇಜ್‌ನ ಗೇಟ್‌ಗಳನ್ನು ಸಂಪೂರ್ಣವಾಗಿ ತೆರೆಯಲಾಗಿದ್ದು, ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದಿದ್ದು, ಆಡಳಿತದ ಸೂಚನೆಯಂತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಮನವಿ ಮಾಡಿವೆ.
