ಬೆಂಗಳೂರು, ಸೆ.5- ಬೆಂಗಳೂರಿನ ಪಿಜಿಗಳಲ್ಲಿ ವಾಸಿಸುವವರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಹಾಗೂ ಅಡುಗೆಮನೆಗಳ ಸ್ವಚ್ಛತೆ ಕುರಿತು ನಿರಂತರ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಗ್ರೇಟರ್ ಬೆಂಗಳೂರು ವ್ಯಾಪ್ತಿಯ 64 ಪೇಯಿಂಗ್ ಗೆಸ್ಟ್ (ಪಿಜಿ) ಕೇಂದ್ರಗಳ ಮೇಲೆ ಏಕಕಾಲದಲ್ಲಿ ತಪಾಸಣೆ ನಡೆಸಿದ್ದಾರೆ.
ತಪಾಸಣೆ ವೇಳೆ ನೈರ್ಮಲ್ಯದ ಕೊರತೆ, ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ, ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಸಂಗ್ರಹಣೆಯಲ್ಲಿ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ 23 ಪಿಜಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಆಹಾರ ತಯಾರಿಕೆ ಮತ್ತು ಸಂಗ್ರಹಣೆಯ ವಿಧಾನ, ಅಡುಗೆಮನೆಯ ಸ್ವಚ್ಛತೆ, ಕಚ್ಚಾ ವಸ್ತುಗಳ ಗುಣಮಟ್ಟ, ಆಹಾರ ಉತ್ಪನ್ನಗಳ ಲೇಬಲಿಂಗ್ ಹಾಗೂ ಬಳಕೆಯ ಅವಧಿ ಸೇರಿದಂತೆ ವಿವಿಧ ಮಾನದಂಡಗಳನ್ನು ಆಧರಿಸಿ ತಪಾಸಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಸೇರಿದಂತೆ ಸಂಬಂಧಿತ ನಿಯಮಗಳಡಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ತಪಾಸಣೆ ವೇಳೆ ಕೆಲವು ಪಿಜಿಗಳಲ್ಲಿ ಅವಧಿ ಮೀರಿದ ಮೊಸರು, ಮಸಾಲೆ ಪದಾರ್ಥಗಳು, ರೈಸ್ ಫ್ಲೋರ್, ಸಿಂಥೆಟಿಕ್ ಫುಡ್ ಕಲರ್ ಹಾಗೂ ಮಿಸ್‌ಬ್ರ್ಯಾಂಡೆಡ್ ಆಹಾರ ಉತ್ಪನ್ನಗಳು ಪತ್ತೆಯಾಗಿದ್ದು, ಅವುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನಂದನ ಎಲೈಟ್ ಪಿಜಿ ಡೈನಿಂಗ್ ಏರಿಯಾ ಸೀಲ್
ಬೊಮ್ಮಸಂದ್ರದ ನಂದನ ಎಲೈಟ್ ಪಿಜಿಯಲ್ಲಿ ತೀವ್ರ ನಿರ್ಲಕ್ಷ್ಯ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಡೈನಿಂಗ್ ಏರಿಯಾವನ್ನು ಸೀಲ್ ಮಾಡಿದ್ದಾರೆ.ತಪಾಸಣೆ ವೇಳೆ ಊಟದ ಮೇಜಿನ ಮೇಲೆಯೇ ಆಹಾರದ ಜತೆಗೆ ತಿಗಣೆ ನಿವಾರಕ ಪೌಡರ್ ಇಟ್ಟಿರುವುದು ಹಾಗೂ ಕುಡಿಯುವ ನೀರಿನ ಸ್ಥಳದ ಸಮೀಪ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿರುವುದು ಪತ್ತೆಯಾಗಿದೆ. ಆಹಾರ ಪದಾರ್ಥಗಳು ಮತ್ತು ರಾಸಾಯನಿಕ ಸೇರಿದಂತೆ ಇತರೆ ವಸ್ತುಗಳ ನಡುವೆ ಅಗತ್ಯ ಪ್ರತ್ಯೇಕತೆ ಕಾಯ್ದುಕೊಳ್ಳದಿರುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಹಿನ್ನೆಲೆಯಲ್ಲಿ ಡೈನಿಂಗ್ ಏರಿಯಾವನ್ನು ಸೀಲ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಜಿಗಳಲ್ಲಿ ಆಹಾರ ಪದಾರ್ಥಗಳ ತಯಾರಿಕೆ ಮತ್ತು ಬಳಕೆಯ ಅವಧಿ, ಪ್ಯಾಕೆಟ್‌ಗಳ ಲೇಬಲಿಂಗ್, ಕಚ್ಚಾ ವಸ್ತುಗಳ ಗುಣಮಟ್ಟ, ಆಹಾರ ಸಂಗ್ರಹಣೆ ಹಾಗೂ ಅಡುಗೆಮನೆಯ ನೈರ್ಮಲ್ಯ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಲಾಗಿದೆ.
ಇದಲ್ಲದೆ, 12 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆಯ ವರದಿ ಬಂದ ಬಳಿಕ ಆಹಾರ ಪದಾರ್ಥಗಳು ನಿಗದಿತ ಸುರಕ್ಷತಾ ಹಾಗೂ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತಿವೆಯೇ ಎಂಬುದು ಸ್ಪಷ್ಟವಾಗಲಿದೆ.
ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಒದಗಿಸುವುದು ಪಿಜಿ ಮಾಲೀಕರ ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ನಿಯಮ ಉಲ್ಲಂಘಿಸುವ ಪಿಜಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
