Homeರಾಜ್ಯಒಂದಕ್ಕಿಂತ ಹೆಚ್ಚು ವೋಟರ್‌ ಐಡಿ ಹೊಂದಿದ್ದರೆ ಕ್ರಿಮಿನಲ್‌ ಕೇಸ್

ಒಂದಕ್ಕಿಂತ ಹೆಚ್ಚು ವೋಟರ್‌ ಐಡಿ ಹೊಂದಿದ್ದರೆ ಕ್ರಿಮಿನಲ್‌ ಕೇಸ್

ಬೆಂಗಳೂರು, ಸೆ.5- ಮತದಾರರ ಪಟ್ಟಿಯಲ್ಲಿ ನಕಲಿ ಹೆಸರು, ದ್ವಿಮುಖ ನೋಂದಣಿ ಅಥವಾ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವ ಪ್ರಕರಣಗಳು ಪತ್ತೆಯಾದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್‌. ರಮೇಶ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ದಕ್ಷಿಣ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಚುನಾವಣಾ ಆಯೋಗದ ಪರಿಷ್ಕೃತ ವೇಳಾಪಟ್ಟಿಯಂತೆ ಆಗಸ್ಟ್‌ 24ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಪಟ್ಟಿಗಳನ್ನು ವಿತರಿಸಲಾಗಿದೆ. ಸೆಪ್ಟೆಂಬರ್‌ 3ರ ಮಾಹಿತಿಯಂತೆ ನಮೂನೆ 9, 10, 11 ಹಾಗೂ ಭಾವಚಿತ್ರರಹಿತ ಕರಡು ಮತದಾರರ ಪಟ್ಟಿಯ ಮಾಹಿತಿಯನ್ನು ಪೆನ್‌ಡ್ರೈವ್‌ ಮೂಲಕ ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಗಿದೆ.

237 ಹೆಚ್ಚುವರಿ ಎಇಆರ್‌ಒಗಳ ನೇಮಕ

ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದ ವಿಚಾರಣೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು 237 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು (ಎಇಆರ್‌ಒ) ನೇಮಕ ಮಾಡಲಾಗಿದೆ. ಅವರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ದಿನಕ್ಕೆ ಗರಿಷ್ಠ 50ರಿಂದ 60 ಪ್ರಕರಣಗಳ ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ.

ನೋಟಿಸ್‌ ಪಡೆದ ಮತದಾರರಿಗೆ ವಿಚಾರಣೆಗೆ ಹಾಜರಾಗಲು ಕನಿಷ್ಠ ಏಳು ದಿನಗಳ ಕಾಲಾವಕಾಶ ನೀಡಬೇಕು. ಮೊದಲ ನೋಟಿಸ್‌ಗೆ ಹಾಜರಾಗಲು ಸಾಧ್ಯವಾಗದವರಿಗೆ ಅಗತ್ಯವಿದ್ದಲ್ಲಿ ಎರಡನೇ ನೋಟಿಸ್‌ ನೀಡಿ ವಿಚಾರಣೆ ನಡೆಸಬೇಕು ಎಂದು ರಮೇಶ್‌ ಸೂಚಿಸಿದರು.

ವೃದ್ಧರು, ಅನಾರೋಗ್ಯ ಪೀಡಿತರಿಗೆ ಮನೆ ಬಳಿಯೇ ಪರಿಶೀಲನೆ

ಆಸ್ಪತ್ರೆಗೆ ದಾಖಲಾಗಿರುವವರು, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನ ಮತದಾರರನ್ನು ಕಚೇರಿಗೆ ಕರೆಸುವ ಬದಲು ಬಿಎಲ್‌ಒ ಅಥವಾ ಎಇಆರ್‌ಒಗಳು ಅವರ ಮನೆ ಅಥವಾ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಗಿದೆ.

ವಿಚಾರಣೆಗೆ ಹಾಜರಾಗುವ ಮತದಾರರು ಸಲ್ಲಿಸುವ ದಾಖಲೆಗಳಿಗಾಗಿ ಹಿಯರಿಂಗ್‌ ರಿಜಿಸ್ಟರ್‌ ನಿರ್ವಹಿಸಬೇಕು. ದಾಖಲೆಗಳಿಗೆ ಹಿಂಬರಹ ನೀಡಿ ಸಿಸ್ಟಮ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ವಿಚಾರಣೆಯ ದಿನಾಂಕ, ಸಮಯ ಹಾಗೂ ಸ್ಥಳವನ್ನು ನೋಟಿಸ್‌ನಲ್ಲಿ ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದ್ವಿಮುಖ ನೋಂದಣಿಗೆ ಕಠಿಣ ಕ್ರಮ

ಒಬ್ಬ ಮತದಾರನ ಹೆಸರು ಕರ್ನಾಟಕದ ಜೊತೆಗೆ ಬೇರೆ ರಾಜ್ಯದಲ್ಲಿಯೂ ಅಥವಾ ಒಂದಕ್ಕಿಂತ ಹೆಚ್ಚು ಮತದಾರರ ಪಟ್ಟಿಗಳಲ್ಲಿಯೂ ಇರುವುದಾಗಿ ಕಂಡುಬಂದರೆ ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 31ರಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅದೇ ರೀತಿ ಫಾರ್ಮ್‌-6 ಮತ್ತು ಫಾರ್ಮ್‌-8ರ ಅರ್ಜಿಗಳನ್ನು ಮರುಪರಿಶೀಲಿಸಿ, ಅರ್ಹ ಪ್ರಕರಣಗಳನ್ನು ಮಾತ್ರ ಪರಿಗಣಿಸುವಂತೆ ಸೂಚಿಸಲಾಗಿದೆ.

ವಾರ್ಡ್‌ವಾರು ಜಾಗೃತಿ ಅಭಿಯಾನ

ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವಾರ್ಡ್‌ಗೆ ಒಂದರಂತೆ ಧ್ವನಿವರ್ಧಕ ಅಳವಡಿಸಿದ ಆಟೋಗಳ ಮೂಲಕ ಬೆಳಗ್ಗೆ ಮತ್ತು ಸಂಜೆ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ. ಶಾಲಾ-ಕಾಲೇಜುಗಳು, ವೃತ್ತಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬ್ಯಾನರ್‌ಗಳ ಮೂಲಕವೂ ಜಾಗೃತಿ ಮೂಡಿಸಲಾಗುತ್ತದೆ.

ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಬಿಎಲ್‌ಒಗಳ ಕಾರ್ಯವೈಖರಿ, ವಿಳಾಸಗಳಲ್ಲಿನ ಲೋಪದೋಷಗಳು ಹಾಗೂ ಕ್ಷೇತ್ರ ಭೇಟಿಗೆ ಸಂಬಂಧಿಸಿದಂತೆ ಹಲವು ದೂರುಗಳನ್ನು ಸಲ್ಲಿಸಿದರು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ರಮೇಶ್‌ ಸೂಚಿಸಿದರು.

ಸಭೆಯಲ್ಲಿ ಅಪರ ಆಯುಕ್ತ ರಾಚಪ್ಪ, ಚುನಾವಣಾ ವಿಭಾಗದ ತಹಶೀಲ್ದಾರ್‌ ರಶ್ಮಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

RELATED ARTICLES
spot_img

Latest News