Homeರಾಜ್ಯಯುಪಿಐ ಶುಲ್ಕ: ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕ್‌ ಖರ್ಗೆ ಆಕ್ರೋಶ

ಯುಪಿಐ ಶುಲ್ಕ: ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕ್‌ ಖರ್ಗೆ ಆಕ್ರೋಶ

ಬೆಂಗಳೂರು, ಸೆ.22- ದೇಶದ ಅತಿ ದೊಡ್ಡ ಹಾಗೂ ಯಶಸ್ವಿ ಡಿಜಿಟಲ್‌ ಸಾರ್ವಜನಿಕ ಸೇವೆಯಾದ ಯುಪಿಐ ವ್ಯವಸ್ಥೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಲವು ವರ್ಷಗಳಿಂದ ವಿಶ್ವದಾದ್ಯಂತ ತನ್ನ ಸಾಧನೆ ಎಂದು ಬಿಂಬಿಸುತ್ತಿದೆ. ಆದರೆ ಇದೀಗ ಅದನ್ನೇ ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಸಂಸ್ಥೆಗಳಿಗೆ ಆದಾಯದ ಮೂಲವನ್ನಾಗಿ ಮಾಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.

ಯುಪಿಐ ಯಶಸ್ಸಿನಲ್ಲಿ ಶೂನ್ಯ ವ್ಯಾಪಾರಿ ರಿಯಾಯಿತಿ ಶುಲ್ಕ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಇದೀಗ 2 ಸಾವಿರಕ್ಕಿಂತ ಹೆಚ್ಚಿನ ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಿಗೆ ಶೇ.0.4ರಷ್ಟು ಶುಲ್ಕ ವಿಧಿಸುವ ಕ್ರಮ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇದರ ಹೊರೆ ಸಂಪೂರ್ಣವಾಗಿ ಮಾಯವಾಗುವುದಿಲ್ಲ. ವ್ಯಾಪಾರಿಗಳು ಈ ವೆಚ್ಚವನ್ನು ತಾವೇ ಭರಿಸಬೇಕಾಗಬಹುದು ಅಥವಾ ಸರಕು ಮತ್ತು ಸೇವೆಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಂದ ಪರೋಕ್ಷವಾಗಿ ವಸೂಲಿ ಮಾಡಬಹುದು. ಹೀಗಾಗಿ ಸಾಮಾನ್ಯ ಜನರು ಪರೋಕ್ಷವಾಗಿ ಇದರ ಹೊರೆ ಹೊರಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಇದರಿಂದ ಹೆಚ್ಚಿನ ಮೊತ್ತದ ಖರೀದಿ ಹಾಗೂ ವಹಿವಾಟುಗಳು ಮತ್ತೆ ನಗದು ರೂಪದತ್ತ ಸಾಗುವ ಅಪಾಯವೂ ಇದೆ. ಇದೇ ಕೇಂದ್ರ ಸರ್ಕಾರ ಪದೇಪದೇ ಹೆಮೆಪಡುವ ಡಿಜಿಟಲ್‌ ಭಾರತದ ಮಾದರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಇದರ ಜೊತೆಗೆ, ಶೂನ್ಯ ವ್ಯಾಪಾರಿ ರಿಯಾಯಿತಿ ಶುಲ್ಕ ವ್ಯವಸ್ಥೆಯಿಂದ ವಿದೇಶಿ ಪಾವತಿ ಸಂಸ್ಥೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಪರಿಸ್ಥಿತಿಯಲ್ಲಿ ಏನು ಬದಲಾವಣೆಯಾಗಿದೆ? ಮತ್ತು ಈ ಸಮಯದಲ್ಲೇ ಶುಲ್ಕ ವಿಧಿಸುವ ನಿರ್ಧಾರ ಏಕೆ ಕೈಗೊಳ್ಳಲಾಗಿದೆ? ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

RELATED ARTICLES
spot_img

Latest News