ಬೆಂಗಳೂರು, ಡಿ. 17- ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಅನಧಿಕೃತ ಕಟ್ಟಡಗಳಿಗೆ ನೋಟೀಸ್ ನೀಡುವುದು, ತೆರವುಗೊಳಿಸುವುದು ಮತ್ತು ಆರ್‌ಟಿಐ ಅರ್ಜಿಗಳಿಗೆ ಉತ್ತರಿಸುವ ಕಾರ್ಯಗಳನ್ನು ನಕ್ಷೆ ಮಂಜೂರಾತಿ ನೀಡುವ ಪ್ರಾಧಿಕಾರಕ್ಕೇ ವಹಿಸಬೇಕೆಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.
ನಮ ಈ ನ್ಯಾಯಯುತವಾದ ಆಗ್ರಹಕ್ಕೆ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವ ಕಟ್ಟಡಗಳ ನಕ್ಷೆ ಮಂಜೂರಾತಿಯನ್ನು ಯಾವ ಪ್ರಾಧಿಕಾರವು ನೀಡುತ್ತದೆಯೋ, ಆ ಪ್ರಾಧಿಕಾರವೇ ಕಟ್ಟಡ ನಿರ್ಮಾಣದ ಸಮಯದಲ್ಲಿ ಪರಿಶೀಲನೆ ಮಾಡಿ ವ್ಯತಿರಿಕ್ತ ನಿರ್ಮಾಣ ಕಂಡುಬಂದಲ್ಲಿ ಬೈಲಾಗಳಲ್ಲಿ ಇರುವಂತೆ ಕ್ರಮ ವಹಿಸುವ ಜವಾಬ್ದಾರಿ, ಕೆಎಂಸಿ ಕಾಯ್ದೆಯನ್ವಯ ನೋಟೀಸ್‌ಗಳನ್ನು ಜಾರಿ ಮಾಡುವ ಜವಾಬ್ದಾರಿ ಹಾಗೂ ಈ ಸಂಬಂಧ ಉಚ್ಛ ನ್ಯಾಯಾಲಯ, ಮಾಹಿತಿ ಹಕ್ಕು ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಜವಾಬ್ದಾರಿಯನ್ನು ಕಟ್ಟಡ ನಕ್ಷೆ ಮಂಜೂರಾತಿ ನೀಡಿರುವ ಪ್ರಾಧಿಕಾರವೇ ನಿರ್ವಹಿಸತಕ್ಕದ್ದು ಹಾಗೂ ಮಂಜೂರಾತಿ ನೀಡಿರುವ ಪ್ರಾಧಿಕಾರವನ್ನು ಹೊರತುಪಡಿಸಿ, ಅನುಮೋದನೆ ನೀಡಿರದ ಇನ್ನೊಂದು ಪ್ರಾಧಿಕಾರಕ್ಕೆ ಪ್ರತ್ಯಾಯೋಜಿಸತಕ್ಕದ್ದಲ್ಲ ಎಂದು ಬಿಬಿಎಂಪಿ ಹಿಂದಿನ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿ ಅಂಗೀಕರಿಸಲಾಗಿದೆ.
ಈ ನಿರ್ಣಯವನ್ನು ಬದಿಗೆ ತಳ್ಳಿ, ಈಗಿನ ಬೆಂಗಳೂರು ನಗರ ಪಾಲಿಕೆಗಳು ನಿಯಮಬಾಹಿರವಾದ ಪ್ರತ್ಯಾಯೋಜನೆ ನೀಡುವ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ಮೂಲ ನೌಕರರ ಹಿತಾಸಕ್ತಿಗಳಿಗೆ ವಿರುದ್ಧವಾದ ಆದೇಶವನ್ನು ಹೊರಡಿಸಿರುತ್ತದೆ ಹಿಂದಿನ ಬಿಬಿಎಂಪಿಯ 17 ಇಲಾಖೆಗಳ ಪೈಕಿ, ಅತಿ ಹೆಚ್ಚು ಭ್ರಷ್ಟಾಚಾರ ನಡೆಯುವ ಇಲಾಖೆ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ನಗರ ಯೋಜನೆ ಇಲಾಖೆಯಲ್ಲಿ ಒಟ್ಟು ಅನುಮೋದಿತ ಹುದ್ದೆಗಳಿಗಿಂತ ಎರಡು ಪಟ್ಟು ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅದೇ ಅಧಿಕಾರಿಗಳು ಈಗಿನ 05 ನಗರ ಪಾಲಿಕೆಗಳಲ್ಲಿಯೂ ಮುಂದುವರೆದಿದ್ದಾರೆ. ಅವರ ಪೈಕಿ ಶೇ. 95% ರಷ್ಟು ಮಂದಿ ಎರವಲು ಸೇವೆ ಅಡಿಯಲ್ಲಿ ರಾಜ್ಯ ಸರ್ಕಾರದ ನಗರ ಯೋಜನೆ ಮತ್ತು ಇಲಾಖೆಗಳಿಂದ ಬಂದವರಾಗಿದ್ದಾರೆ.
ತಮ ಗಾಡ್‌ಫಾದರ್‌ಗಳನ್ನು ಮೆಚ್ಚಿಸಿ ಇಂತಹ ಇಲಾಖೆಗೆ ಬಂದಿರುವ ಎರವಲು ಸೇವೆ ಅಧಿಕಾರಿಗಳು ಓಸಿ, ಸಿಸಿ ನೀಡುವ ನೆಪದಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುತ್ತಿದ್ದಾರೆ. ಹೀಗಾಗಿ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ನಗರಾಭಿವೃದ್ಧಿ ಇಲಾಖೆ ಮುಖ್ಯಸ್ಥ ತುಷಾರ್ ಗಿರಿನಾಥ್ ಹಾಗೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಪತ್ರ ಬರೆದಿದ್ದಾರೆ.
