Homeರಾಜ್ಯರಾಜ್ಯದ ಪ್ರತಿ ತಾಲ್ಲೂಕಿನಲ್ಲಿ 20 ಎಕರೆ ಕೈಗಾರಿಕಾ ಪ್ರದೇಶ ಸ್ಥಾಪನೆ : ಸಚಿವ ಕಾಶಪ್ಪನವರ

ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ 20 ಎಕರೆ ಕೈಗಾರಿಕಾ ಪ್ರದೇಶ ಸ್ಥಾಪನೆ : ಸಚಿವ ಕಾಶಪ್ಪನವರ

ಬೆಂಗಳೂರು, ಸೆ.23- ರಾಜ್ಯದ ಪ್ರತಿಯೊಂದು ತಾಲ್ಲೂಕಿನಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಕ್ಷಣವೇ ಕನಿಷ್ಠ 20 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ (ಇಂಡಸ್ಟ್ರಿಯಲ್ ಪಾರ್ಕ್) ಸ್ಥಾಪಿಸಬೇಕೆಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಿನ್ನೆ ವಿಕಾಸಸೌಧದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ಯಮ ವಲಯದ ಹೆಚ್ಚುವರಿ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರ ಸಭೆ ನಡೆಸಿದ ಅವರು, ತಾಲ್ಲೂಕು ಕೇಂದ್ರಗಳಲ್ಲಿ ಲಭ್ಯವಿರುವ ಕಡೆ ಜಮೀನುಗಳನ್ನು ಗುರುತಿಸಿ, ಅಗತ್ಯವಿದ್ದಲ್ಲಿ ಭೂಸ್ವಾಧೀನ ಮಾಡಿಕೊಂಡು ಕನಿಷ್ಠ 20 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಬೇಕು. ಇದರಿಂದ ಸಣ್ಣ ಕೈಗಾರಿಕಾ ಉದ್ಯಮಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಿ, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದರೆ ಉದ್ಯಮಿಗಳು ಮುಂದೆ ಬಂದು ಕೈಗಾರಿಕೆಗಳನ್ನು ಸ್ಥಾಪಿಸಲಿದ್ದಾರೆ. ಇದರಿಂದ ಸ್ಥಳೀಯರು ಹಾಗೂ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.

ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸುವಾಗ ರೈತರ ಜಮೀನನ್ನು ಯಾವುದೇ ಕಾರಣಕ್ಕೂ ಭೂಸ್ವಾಧೀನ ಮಾಡಿಕೊಳ್ಳಬಾರದು. ಯಾರು ಸ್ವಯಂಪ್ರೇರಿತರಾಗಿ ಜಮೀನು ನೀಡಲು ಮುಂದೆ ಬರುತ್ತಾರೋ ಅವರಿಗೆ ಮೊದಲ ಆದ್ಯತೆ ನೀಡಬೇಕು. ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಖ್ಯವಾಗಿ ರಸ್ತೆ, ವಿದ್ಯುತ್, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ತಾಲ್ಲೂಕು ಮಟ್ಟದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಉದ್ಯೋಗ ಸೃಷ್ಟಿಗೆ ಮುನ್ನುಡಿ ಬರೆದಂತಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸೂಚಿಸಿದರು.

ಲ್ಯಾಂಡ್‌ ಬ್ಯಾಂಕ್‌ ಸ್ಥಾಪಿಸಿ

ಅಗತ್ಯವಿರುವ ಕಡೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಲ್ಯಾಂಡ್‌ ಬ್ಯಾಂಕ್‌ ಸ್ಥಾಪಿಸಲು ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಲ್ಯಾಂಡ್‌ ಬ್ಯಾಂಕ್‌ ಸ್ಥಾಪಿಸಿದರೆ ಉದ್ಯಮಿಗಳು ತಮಗೆ ಬೇಕಾದ ಕಡೆ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲವಾಗಲಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಲಭ್ಯವಿರುವ ಜಮೀನನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇಳಕಲ್‌ನಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌

ಬಾಗಲಕೋಟೆ ಜಿಲ್ಲೆಯ ಇಳಕಲ್‌ ತಾಲ್ಲೂಕಿನಲ್ಲಿ ಬಹುದಿನಗಳ ಕನಸಾಗಿರುವ ಟೆಕ್ಸ್‌ಟೈಲ್‌ ಪಾರ್ಕ್‌ ಅನ್ನು ಆದಷ್ಟು ಶೀಘ್ರ ಸ್ಥಾಪಿಸಲು ಅಧಿಕಾರಿಗಳು ವಿಶೇಷ ನಿಗಾ ವಹಿಸಬೇಕು ಎಂದು ಸಚಿವ ವಿಜಯಾನಂದ ಕಾಶಪ್ಪನವರ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇಳಕಲ್‌ನಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಾಣ ಮಾಡಬೇಕೆಂಬುದು ದಶಕಗಳ ಕನಸಾಗಿದೆ. ಬೇರೆ ಬೇರೆ ಕಾರಣಗಳಿಂದ ಇದು ಕಾರ್ಯಗತವಾಗದೆ ಕೇವಲ ಕಾಗದದಲ್ಲೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವೈಯಕ್ತಿಕವಾಗಿ ತಮಗೂ ಇಳಕಲ್‌ನಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಾಣ ಮಾಡಬೇಕೆಂಬ ಗುರಿಯಿದೆ. ತಮ್ಮ ಅಧಿಕಾರಾವಧಿಯಲ್ಲಿ ಈ ಕನಸು ನನಸಾಗಬೇಕು. ಅಧಿಕಾರಿಗಳು ಕುಂಟು ನೆಪ ಹೇಳದೆ, ಆದಷ್ಟು ಶೀಘ್ರ ಇದನ್ನು ಕಾರ್ಯಗತಗೊಳಿಸಲು ಮುಂದಾಗಬೇಕು ಎಂದು ಸೂಚಿಸಿದರು.

ಇಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಾಣವಾದರೆ ಯುವಕರಿಗೆ ಉದ್ಯೋಗ ದೊರೆಯಲಿದೆ. ಅಲ್ಲದೆ, ಇಲ್ಲಿಂದಲೇ ದೇಶ ಹಾಗೂ ವಿದೇಶಗಳಿಗೆ ಜವಳಿಯನ್ನು ರಫ್ತು ಮಾಡಬಹುದು. ಇದಕ್ಕೆ ಬೇಕಾಗಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲಿದ್ದೇವೆ. ಮೊದಲು ಈ ಯೋಜನೆ ಕಾರ್ಯಗತವಾಗಬೇಕು ಎಂದು ನುಡಿದರು. ಇದೇ ವೇಳೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ ಎಂದು ಕೆಲವು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಸ್ಪಂದಿಸಿದ ಸಚಿವ ಕಾಶಪ್ಪನವರ, ಆದಷ್ಟು ಶೀಘ್ರ ಇಲಾಖೆಯ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಸಣ್ಣ ಕೈಗಾರಿಕೆಗಳ ಉದ್ಯಮಿಗಳಿಗೆ ಅನಗತ್ಯವಾಗಿ ತೊಂದರೆ ನೀಡದಂತೆ ಸೂಚಿಸುವುದಾಗಿ ಅಭಯ ನೀಡಿದರು.

ಈ ಸಂದರ್ಭದಲ್ಲಿ ಎಂಎಸ್‌ಎಂಇ ನಿರ್ದೇಶಕ ವೈ.ಎಸ್. ಪಾಟೀಲ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
spot_img

Latest News