Homeಬೆಂಗಳೂರುಜಿಬಿಎ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಇನ್ನೂ ಸಿಕ್ಕಿಲ್ಲ ಶೂ, ಸಾಕ್ಸ್ , ಬ್ಯಾಗ್‌, ಸ್ವೆಟರ್‌ಗಳು

ಜಿಬಿಎ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಇನ್ನೂ ಸಿಕ್ಕಿಲ್ಲ ಶೂ, ಸಾಕ್ಸ್ , ಬ್ಯಾಗ್‌, ಸ್ವೆಟರ್‌ಗಳು

ಬೆಂಗಳೂರು, ಸೆ.23- ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ದೊರೆಯಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳು ದೊರಕುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.

ಶೈಕ್ಷಣಿಕ ವರ್ಷ ಶುರುವಾಗಿ ನಾಲ್ಕು ತಿಂಗಳು ಕಳೆದರೂ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆ ಶಾಲೆ-ಕಾಲೇಜುಗಳ ಸುಮಾರು 23 ಸಾವಿರ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ , ಶಾಲಾ ಬ್ಯಾಗ್‌ ಹಾಗೂ ಸ್ವೆಟರ್‌ ವಿತರಣೆಯಾಗಿಲ್ಲ.

ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯದಿಂದ ಪಾಲಿಕೆ ಶಾಲೆಗಳಲ್ಲಿ ಓದುತ್ತಿರುವ ಬಡ ಹಾಗೂ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿಗಳು ಹಲವಾರು ಸಮಸ್ಯೆ ಎದುರಿಸುವಂತಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಅಗತ್ಯ ಶೈಕ್ಷಣಿಕ ಪರಿಕರಗಳನ್ನು ಒದಗಿಸುವ ಯೋಜನೆಗಳಿದ್ದರೂ, ಅವುಗಳ ಅನುಷ್ಠಾನದಲ್ಲಿನ ವಿಳಂಬ ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಮಕ್ಕಳಿಗೆ ಸಮಯಕ್ಕೆ ಅಗತ್ಯ ಸೌಲಭ್ಯ ಸಿಗಬೇಕಾದರೆ ಟೆಂಡರ್‌ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಟೆಂಡರ್‌ಗೆ ಸ್ಪಂದನೆಯೇ ಇಲ್ಲ:
ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಮತ್ತು ಬ್ಯಾಗ್‌ ಒದಗಿಸಲು ಟೆಂಡರ್‌ ಆಹ್ವಾನಿಸಲಾಗಿತ್ತು. ಆದರೆ ಎರಡು ಬಾರಿ ಟೆಂಡರ್‌ ಕರೆದರೂ ಗುತ್ತಿಗೆದಾರರು ಭಾಗವಹಿಸಿಲ್ಲ ಎನ್ನಲಾಗಿದೆ. ಇದೀಗ ಮೂರನೇ ಬಾರಿ ಟೆಂಡರ್‌ ಆಹ್ವಾನಿಸಲಾಗಿದೆ.ಮೂರನೇ ಟೆಂಡರ್‌ಗೆ ಗುತ್ತಿಗೆದಾರರಿಂದ ಸ್ಪಂದನೆ ದೊರೆತರೆ, ಮುಂದಿನ ಹಂತದಲ್ಲಿ ಟೆಂಡರ್‌ ಅಂತಿಮಗೊಳಿಸಿ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.ಇದರಿಂದ ಶೈಕ್ಷಣಿಕ ವರ್ಷ ಆರಂಭವಾದರೂ ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳು ಟೆಂಡರ್‌ ಪ್ರಕ್ರಿಯೆಯಲ್ಲೇ ಸಿಲುಕಿರುವಂತಾಗಿದೆ.

ಇನ್ನು ಶೂ ಮತ್ತು ಸ್ವೆಟರ್‌ ಖರೀದಿಗೆ ಹಣವನ್ನು ಪೋಷಕರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೋಷಕರ ಬ್ಯಾಂಕ್‌ ಖಾತೆ ವಿವರಗಳನ್ನು ಸಂಗ್ರಹಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಆದರೆ ಈ ಪ್ರಕ್ರಿಯೆಗೆ ಸುಮಾರು ಮೂರು ತಿಂಗಳ ಕಾಲಾವಕಾಶ ಬೇಕಾಗಬಹುದು ಎನ್ನಲಾಗಿದ್ದು, ಅಷ್ಟರೊಳಗೆ ಮಕ್ಕಳಿಗೆ ಸೌಲಭ್ಯಗಳು ದೊರೆಯಲಿವೆಯೇ ಎಂಬ ಪ್ರಶ್ನೆ ಕಾಡತೊಡಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲೂ ಸ್ವೆಟರ್‌ ವಿತರಣೆಗೆ ಟೆಂಡರ್‌ ಕರೆದಿದ್ದರೂ, ಶೈಕ್ಷಣಿಕ ವರ್ಷ ಮುಗಿಯುವವರೆಗೂ ಹಲವು ವಿದ್ಯಾರ್ಥಿಗಳಿಗೆ ಸ್ವೆಟರ್‌ ಸಿಕ್ಕಿರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ವಿಳಂಬಕ್ಕೆ ಕಾರಣವೇನು..?
ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿ ಪದೇಪದೇ ಟೆಂಡರ್‌ ವಿಫಲವಾಗುತ್ತಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಟೆಂಡರ್‌ನಲ್ಲಿ ಗುತ್ತಿಗೆದಾರರು ಭಾಗವಹಿಸದಿರುವುದಕ್ಕೆ ಕಾರಣವೇನು? ದರ ನಿಗದಿ ಅಥವಾ ಷರತ್ತುಗಳಲ್ಲಿ ಸಮಸ್ಯೆಯಿದೆಯೇ? ಎಂಬ ಬಗ್ಗೆ ಜಿಬಿಎ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ.

ಇನ್ನು ಟೆಂಡರ್‌ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ಅಥವಾ ಅಕ್ರಮಗಳಿಗೆ ಅವಕಾಶವಿದೆಯೇ ಎಂಬ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಬೇಕಾಗಿದೆ.

ಮಕ್ಕಳಿಗೆ ಸೌಲಭ್ಯ ಯಾವಾಗ..? ಖಾಸಗಿ ಶಾಲೆಗಳಿಗೆ ಸರಿಸಾಟಿಯಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಶೂ, ಸಾಕ್‌್ಸ, ಬ್ಯಾಗ್‌ ಹಾಗೂ ಸ್ವೆಟರ್‌ನಂತಹ ಮೂಲಭೂತ ಸೌಲಭ್ಯಗಳನ್ನೇ ಶೈಕ್ಷಣಿಕ ವರ್ಷದ ಆರಂಭದಲ್ಲೇ ಒದಗಿಸಲು ಸಾಧ್ಯವಾಗದಿರುವುದು ವ್ಯವಸ್ಥೆಯ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮೂಡಿಸಿದೆ.

ಬಡ ಕುಟುಂಬಗಳ ಮಕ್ಕಳು ಸರ್ಕಾರಿ ಶಾಲೆಗಳ ಉಚಿತ ಸೌಲಭ್ಯಗಳನ್ನೇ ಅವಲಂಬಿಸಿರುವುದರಿಂದ, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಯಾವುದೇ ವಿಳಂಬವಿಲ್ಲದೆ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ಒದಗಿಸಬೇಕು ಎಂಬುದು ಪೋಷಕರ ಆಗ್ರಹವಾಗಿದೆ.

RELATED ARTICLES
spot_img

Latest News