ಬೆಂಗಳೂರು,ಸೆ.23- ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಾಡಳಿತ ಸಚಿವರಾದ ಹೆಚ್.ಸಿ. ಬಾಲಕೃಷ್ಣ ಅವರು ಇಂದು ಪೌರ ಕಾರ್ಮಿಕರೊಂದಿಗೆ ಬೆಳಗಿನ ಉಪಾಹಾರ ಸೇವಿಸಿ, ಮಾತುಕತೆ ನಡೆಸಿದರು.
ನಗರಗಳ ಸ್ವಚ್ಛತೆ, ನೈರ್ಮಲ್ಯ ಹಾಗೂ ಆರೋಗ್ಯಕರ ಪರಿಸರವನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಪ್ರತಿನಿತ್ಯ ಜನರ ಆರೋಗ್ಯ ಮತ್ತು ನಗರಗಳ ಸ್ವಚ್ಛತೆಗಾಗಿ ನಿಸ್ವಾರ್ಥವಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರ ಪರಿಶ್ರಮ ಹಾಗೂ ಸೇವೆಯನ್ನು ಸಚಿವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಪೌರಕಾರ್ಮಿಕರೊಂದಿಗೆ ಉಪಾಹಾರ ಸೇವಿಸುವ ಮೂಲಕ ಅವರೊಂದಿಗೆ ಆತೀಯವಾಗಿ ಬೆರೆತು, ಅವರ ಕರ್ತವ್ಯ, ಸಮಸ್ಯೆಗಳು ಹಾಗೂ ಅಗತ್ಯತೆಗಳ ಕುರಿತು ಮಾತುಕತೆ ನಡೆಸಿದರು. ಪೌರಕಾರ್ಮಿಕರ ಕಲ್ಯಾಣ ಹಾಗೂ ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಪೌರಕಾರ್ಮಿಕರ ಸೇವೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಅವರ ಪರಿಶ್ರಮಕ್ಕೆ ಸಮಾಜದಿಂದ ಗೌರವ ಮತ್ತು ಸಹಕಾರ ದೊರೆಯಬೇಕು ಎಂದು ಸಚಿವರು ಹೇಳಿದರು.
