ಬೆಂಗಳೂರು,ಸೆ.23- ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ಪ್ರಶ್ನಿಸಿ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಖಾಲಿ ಚೊಂಬು ಹಾಗೂ ತೆಂಗಿನಕಾಯಿ ಚಿಪ್ಪುಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ರಾಜ್ಯದ ಖಜಾನೆ ಖಾಲಿಯಾಗಿದೆ, ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದ ಪ್ರತಿಪಕ್ಷ ನಾಯಕರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀ ನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಸುನೀಲ್ ಕುಮಾರ್, ಎಸ್.ಸುರೇಶ್ ಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ, ಜೆಡಿಎಸ್ ಸದಸ್ಯರು ಭಾಗವಹಿಸಿದ್ದರು.
ಪಾಪರ್ ಸರ್ಕಾರದ ಘೋಷಣೆ:
ಖಾಲಿ ಚೊಂಬುಗಳನ್ನು ಹಿಡಿದುಕೊಂಡು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆರ್ಥಿಕತೆ ನಿರ್ವಹಿಸುವಲ್ಲಿ ಸರ್ಕಾರ ವಿಫಲ, ಡಿಕೆಶಿ ವಿಫಲ, ಪಾಪರ್ ಸರ್ಕಾರ ಎಂಬ ಘೋಷಣೆಗಳೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.ಡಿ.ಕೆ.ಶಿವಕುಮಾರ್ ಅವರ ಘೋಷಣೆಗಳು ಬೋಗಸ್, ಅವರ ಸಂಪುಟವೂ ಬೋಗಸ್ ಸಂಪುಟ ಎಂದು ಪ್ರತಿಪಕ್ಷ ಸದಸ್ಯರು ಟೀಕಿಸಿದರು.
ಆರ್.ಅಶೋಕ್ ಮಾತನಾಡಿ, ಮುಖ್ಯ ಮಂತ್ರಿ ಯಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಆರ್ಥಿಕ ಇಲಾಖೆ ಮೇಲೆಯೇ ನಿಯಂತ್ರಣ ಇಲ್ಲ ಎಂದು ಆರೋಪಿಸಿದರು.ರಾಜ್ಯದ ಆರ್ಥಿಕತೆ ಹಳ್ಳ ಹಿಡಿದಿದ್ದು, ಸರ್ಕಾರ ಪಾಪರ್ ಆಗಿದೆ ಎಂದು ದೂರಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಒತ್ತಾಯಿಸಿದರು.
ವಿಜಯೇಂದ್ರ ವಾಗ್ದಾಳಿ :
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಸರ್ಕಾರ ಐಸಿಯುನಲ್ಲಿದೆ, ದಿವಾಳಿಯಾಗಿದೆ. ಸರ್ಕಾರ ಜಾಹೀರಾತುಗಳನ್ನು ನೀಡುತ್ತಾ ಕಾಲ ಕಳೆಯುತ್ತಿದೆ ಎಂದು ಟೀಕಿಸಿದರು.
ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ನೀಡಲು ಹಣದ ಸಮಸ್ಯೆ ಎದುರಾಗಿದೆ. ಶಿಕ್ಷಕರ ನೇಮಕಾತಿಗೂ ಆರ್ಥಿಕ ತೊಂದರೆ ಎದು ರಾಗಿದೆ. ಉದ್ಯೋಗ ನೀಡುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
