Homeರಾಷ್ಟ್ರೀಯಬಾಲಕಿ ಅತ್ಯಾಚಾರ ಪ್ರಕರಣ : 15 ವರ್ಷಗಳ ಬಳಿಕ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

ಬಾಲಕಿ ಅತ್ಯಾಚಾರ ಪ್ರಕರಣ : 15 ವರ್ಷಗಳ ಬಳಿಕ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

ಥಾಣೆ, ಸೆ.8- 2011ರಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್‌ನ ವಿಶೇಷ ತ್ವರಿತ ನ್ಯಾಯಾಲಯವು ಅಪರಾಧಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿ.ಪಿ. ಮುಳೆ ಅವರು ತೀರ್ಪು ನೀಡಿದ್ದು, ಸಂತ್ರಸ್ತೆ ಆರೋಪಿಯೊಂದಿಗೆ ಪರಾರಿಯಾಗುವ ಸಂದರ್ಭದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರೂ, ಆಕೆ ಅಪ್ರಾಪ್ತೆಯಾಗಿದ್ದ ಕಾರಣ ಅದನ್ನು ಸ್ವಯಂಪ್ರೇರಿತ ಮತಾಂತರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಥಾಣೆ ಜಿಲ್ಲೆಯ ಡೊಂಬಿವ್ಲಿ ನಿವಾಸಿಯಾಗಿದ್ದ ಸಂತ್ರಸ್ತೆ, ಆರೋಪಿ ಅಜರ್‌ ಅಲಿಯಾಸ್‌ ಬಡು ಮುಸ್ತಾಕ್‌ ಖುರೇಷಿ (39) ಜೊತೆ ಸ್ವಯಂಪ್ರೇರಿತವಾಗಿ ಲಖನೌಗೆ ತೆರಳಿದ್ದಳು. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧದ ಅಪಹರಣ ಆರೋಪವನ್ನು ನ್ಯಾಯಾಲಯದಿಂದ ಕೈಬಿಡಲಾಗಿದೆ.

ಆದರೆ, ಆರೋಪಿ ಬೇರೆ ಹೆಸರಿನಲ್ಲಿ ರೈಲು ಟಿಕೆಟ್‌ ಖರೀದಿಸಿರುವುದು ಕೃತ್ಯ ಪೂರ್ವಯೋಜಿತವಾಗಿತ್ತು ಎಂಬುದನ್ನು ತೋರಿಸುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಸಂತ್ರಸ್ತೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವ ಉದ್ದೇಶದಿಂದ ಆರೋಪಿಯೇ ಪೂರ್ವಯೋಜಿತ ಸಂಚು ರೂಪಿಸಿದ್ದನ್ನು ಸಾಕ್ಷ್ಯಗಳು ದೃಢಪಡಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಸಂತ್ರಸ್ತೆ ಅಪ್ರಾಪ್ತ ವಯಸ್ಸಿನಲ್ಲಿದ್ದಾಗಲೇ ಧರ್ಮಾಂತರಗೊಂಡು ಆರೋಪಿಯೊಂದಿಗೆ ಪರಾರಿಯಾಗಿದ್ದ ಹಿನ್ನೆಲೆಯಲ್ಲಿ, ಮತಾಂತರದ ವಿಧಿವಿಧಾನಗಳಲ್ಲಿ ಆಕೆ ಭಾಗವಹಿಸಿದ್ದನ್ನು ಸ್ವಯಂಪ್ರೇರಿತ ಕೃತ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಸುಪ್ರೀಂ ಕೋರ್ಟ್‌ನ ತೀರ್ಪೊಂದನ್ನು ಉಲ್ಲೇಖಿಸಿದ ನ್ಯಾಯಾಲಯ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಅತ್ಯಾಚಾರಕ್ಕೆ ಸಮಾನವಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದೆ. ಬಾಲಕಿ 15ರಿಂದ 18 ವರ್ಷದೊಳಗಿನ ಪತ್ನಿಯಾಗಿದ್ದರೂ ಈ ಕಾನೂನು ಅನ್ವಯಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

2012ರ ಫೆಬ್ರವರಿ 5ರಿಂದ ಸೆಪ್ಟೆಂಬರ್‌ 12ರವರೆಗೆ ಆರೋಪಿಯು ವಿಚಾರಣಾ ಪೂರ್ವ ಬಂಧನದಲ್ಲಿದ್ದ ಅವಧಿಯನ್ನು ವಿಧಿಸಲಾದ ಶಿಕ್ಷೆಯ ಅವಧಿಯಲ್ಲಿ ಪರಿಗಣಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಸಂತ್ರಸ್ತೆಗೆ ಪರಿಹಾರ ನೀಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಕರಣವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ. ಪ್ರಕರಣದಲ್ಲಿ ಆರೋಪ ಸಾಬೀತುಪಡಿಸಲು ಸಂತ್ರಸ್ತೆ ಸೇರಿದಂತೆ ಒಟ್ಟು ಏಳು ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು ಎಂದು ಹೆಚ್ಚುವರಿ ಸರ್ಕಾರಿ ಅಭಿಯೋಜಕ ಸಚಿನ್‌ ಕುಲಕರ್ಣಿ ತಿಳಿಸಿದ್ದಾರೆ.

RELATED ARTICLES
spot_img

Latest News