ಬೆಂಗಳೂರು, ಸೆ.8- ಕೆಪಿಎಸ್ಸಿ ನೇಮಕಾತಿ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ಬೆಂಗಳೂರಿನ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಡಾಲರ್ಸ್ ಕಾಲನಿಯಲ್ಲಿರುವ ಸಾಹುಕಾರ್ ಅವರ ನಿವಾಸ ಸೇರಿದಂತೆ ಅವರ ಸಂಬಂಧಿಕರ ಮನೆಗಳಲ್ಲೂ ಸಿಐಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೋಮವಾರ ಆರಂಭಗೊಂಡಿರುವ ಶೋಧ ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿದೆ. ಈ ಪ್ರಕರಣದಲ್ಲಿ ಸಾಹುಕಾರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಶೋಧ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.
ನೇಮಕಾತಿ ಅಕ್ರಮಗಳಿಗೆ ಅಂತ್ಯ ಹಾಡಬೇಕಿದ್ದು, ಪ್ರಕರಣದಲ್ಲಿನ ಆರೋಪಗಳು ವ್ಯವಸ್ಥಿತ ವಂಚನೆಯತ್ತ ಬೆರಳು ತೋರಿಸುತ್ತಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇಂತಹ ಅಕ್ರಮಗಳು ಮುಂದುವರಿದರೆ ಸಾರ್ವಜನಿಕರು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಪರಿಸ್ಥಿತಿ ಏನಾಗಲಿದೆ ಎಂಬ ಬಗ್ಗೆಯೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು.
ಪರೀಕ್ಷಾ ದಾಖಲೆಗಳು ಹಾಗೂ ಒಎಂಆರ್ ಶೀಟ್ಗಳಲ್ಲಿ ಅಕ್ರಮವಾಗಿ ಬದಲಾವಣೆ ಮಾಡಿರುವುದು, ಮಧ್ಯವರ್ತಿಗಳಿಗೆ ಹಣ ಪಾವತಿ ಸೇರಿದಂತೆ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಇತರ ಅಕ್ರಮಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ಸಾಹುಕಾರ್ ಸೇರಿದಂತೆ ಪ್ರಕರಣದ ಇತರ ಆರೋಪಿಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಸಿಐಡಿ, ಐಎಎಸ್ ಅಧಿಕಾರಿ ಹಾಗೂ ಕೆಪಿಎಸ್ಸಿಯ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಎಂದು ಆರೋಪಿಸಲಾಗಿರುವ ಬಸವರಾಜ್ ಕನ್ನಾಳೆ ಅವರನ್ನು ಬಂಧಿಸಿದೆ.
ಜುಲೈ 24ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಸಿಐಡಿ 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕರಣದ ತನಿಖೆ ನಡೆಸುತ್ತಿದೆ. ಒಟ್ಟು 400 ಹುದ್ದೆಗಳಲ್ಲಿ 342 ಸಾಮಾನ್ಯ ಹುದ್ದೆಗಳು ಹಾಗೂ 58 ಬ್ಯಾಕ್ಲಾಗ್ ಹುದ್ದೆಗಳು ಸೇರಿವೆ.
