Homeರಾಜ್ಯಯಶವಂತಪುರ ಎಪಿಎಂಸಿಗೆ ದಿಢೀರ್‌ ಭೇಟಿ ನೀಡಿ ರೈತರು-ವರ್ತಕರ ಸಮಸ್ಯೆ ಆಲಿಸಿದ ಸಿಎಂ

ಯಶವಂತಪುರ ಎಪಿಎಂಸಿಗೆ ದಿಢೀರ್‌ ಭೇಟಿ ನೀಡಿ ರೈತರು-ವರ್ತಕರ ಸಮಸ್ಯೆ ಆಲಿಸಿದ ಸಿಎಂ

ಬೆಂಗಳೂರು, ಸೆ.7- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಗರದ ಯಶವಂತಪುರ ಎಪಿಎಂಸಿಗೆ ದಿಢೀರ್‌ ಭೇಟಿ ನೀಡಿ ರೈತರು, ವರ್ತಕರು ಹಾಗೂ ಹಮಾಲಿಗಳ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದರು. ಈ ವೇಳೆ ಹಮಾಲಿಗಳೊಂದಿಗೆ ರಸ್ತೆ ಬದಿಯ ಸಣ್ಣ ಹೋಟೆಲ್‌ನಲ್ಲಿ ಉಪಾಹಾರ ಸೇವಿಸುವ ಮೂಲಕ ಗಮನ ಸೆಳೆದರು.

ಎಪಿಎಂಸಿ ಮಾರುಕಟ್ಟೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಹಾಗೂ ಶುಂಠಿ ಮಂಡಿಗಳಲ್ಲಿನ ವ್ಯಾಪಾರ, ಬೆಲೆ ಪರಿಸ್ಥಿತಿ, ಮೂಲಸೌಕರ್ಯ ಮತ್ತು ಸ್ವಚ್ಛತೆ ಕುರಿತು ಮಾಹಿತಿ ಪಡೆದರು.

ಮಾರುಕಟ್ಟೆಗೆ ಆಗಮಿಸಿದ ಅವರು ಈರುಳ್ಳಿ ಚೀಲಗಳ ಮೇಲೆ ಹಮಾಲಿಗಳೊಂದಿಗೆ ಕುಳಿತು ಮಾತುಕತೆ ನಡೆಸಿದರು. ಬಳಿಕ ಹಮಾಲಿಗಳೊಂದಿಗೆ ರಸ್ತೆ ಬದಿಯ ಹೋಟೆಲ್‌ಗೆ ತೆರಳಿ ಇಡ್ಲಿ, ಸಾಂಬಾರ್‌, ಚಟ್ನಿ ಸೇವಿಸಿದರು. ಚಿತ್ರಾನ್ನ ಹಾಗೂ ಕಾಫಿಯನ್ನೂ ಸೇವಿಸಿದ ಅವರು, ತಮ್ಮ ಉಪಾಹಾರದ ಬಿಲ್‌ ಜತೆಗೆ ಮೂವರು ಹಮಾಲಿಗಳ ಖರ್ಚನ್ನೂ ಪಾವತಿಸಿದರು.

ಈರುಳ್ಳಿ ಬೆಲೆ ಕುಸಿತ

ಈರುಳ್ಳಿ ಬೆಲೆ ಸತತವಾಗಿ ಕುಸಿಯುತ್ತಿದೆ ಎಂದು ಎಪಿಎಂಸಿ ವರ್ತಕರು ಮುಖ್ಯಮಂತ್ರಿಯವರ ಗಮನಕ್ಕೆ ತಂದರು. ಹಿಂದಿನ ದಿನ ಕೆಜಿಗೆ ₹65 ಇದ್ದ ಈರುಳ್ಳಿ ಬೆಲೆ ಇಂದು ₹55ಕ್ಕೆ ಇಳಿದಿದೆ ಎಂದು ತಿಳಿಸಿದರು.

ರೈತರೊಂದಿಗೆ ಚರ್ಚಿಸಿದಾಗ ಮಾರುಕಟ್ಟೆಗೆ ಈರುಳ್ಳಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ತರಲು ಲಾರಿ ಬಾಡಿಗೆ ಹಾಗೂ ಸಾಗಣೆ ವೆಚ್ಚ ಹೆಚ್ಚಾಗಿದೆ ಎಂದು ರೈತರು ಅಳಲು ತೋಡಿಕೊಂಡರು. ಬೆಲೆ ನಿಗದಿ ಮಾಡುವ ವಿಧಾನ, ಗುಣಮಟ್ಟದ ಆಧಾರದ ಮೇಲೆ ದರ ನಿರ್ಧಾರ ಹಾಗೂ ಆಲೂಗಡ್ಡೆ ಹರಾಜು ಪ್ರಕ್ರಿಯೆ ಕುರಿತು ಮುಖ್ಯಮಂತ್ರಿ ಮಾಹಿತಿ ಪಡೆದರು. ಶುಂಠಿ ಮಂಡಿಯ ವ್ಯವಹಾರಗಳನ್ನೂ ಪರಿಶೀಲಿಸಿದರು.

ರೈತರಿಗೆ ಅನ್ಯಾಯವಾಗಬಾರದು

ಮಧ್ಯವರ್ತಿಗಳ ಹಾವಳಿ ಹಾಗೂ ಕಮಿಷನ್‌ ವಿಚಾರದ ಬಗ್ಗೆ ರೈತರನ್ನು ಮುಖ್ಯಮಂತ್ರಿ ಪ್ರಶ್ನಿಸಿದರು. ಕೆಲ ರೈತರು ಕೆಜಿಗೆ ಶೇ.2ರಷ್ಟು, ಅಂದರೆ 60 ಪೈಸೆ ಕಮಿಷನ್‌ ನೀಡಬೇಕಾಗುತ್ತದೆ ಎಂದು ಹೇಳಿದರೆ, ಇನ್ನು ಕೆಲವರು ಯಾವುದೇ ಕಮಿಷನ್‌ ನೀಡುತ್ತಿಲ್ಲ ಎಂದು ತಿಳಿಸಿದರು.

ರೈತರಿಂದ ವಿಭಿನ್ನ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಮಿಷನ್‌ ವ್ಯವಸ್ಥೆಯ ಕುರಿತು ಅಧಿಕಾರಿಗಳಿಂದಲೂ ಮಾಹಿತಿ ಪಡೆದ ಮುಖ್ಯಮಂತ್ರಿ, ರೈತರಿಗೆ ಅನ್ಯಾಯವಾಗಬಾರದು, ವರ್ತಕರಿಗೂ ಅನ್ಯಾಯವಾಗಬಾರದು. ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮೂಲಸೌಕರ್ಯ ಕೊರತೆ, ಭ್ರಷ್ಟಾಚಾರದ ಆರೋಪ

ಎಪಿಎಂಸಿಯಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎಂದು ರೈತರು ಹಾಗೂ ಕಾರ್ಮಿಕರು ಮುಖ್ಯಮಂತ್ರಿಗೆ ದೂರಿದರು. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ₹20 ನೀಡಿ ಬಾಟಲಿ ನೀರು ಖರೀದಿಸಬೇಕಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ, ಹಿಂದಿನ ಅಧಿಕಾರಿಗಳ ಅವಧಿಯಲ್ಲಿ ಎಪಿಎಂಸಿಯಲ್ಲಿ ಭ್ರಷ್ಟಾಚಾರ ಹಾಗೂ ಅವ್ಯವಹಾರ ನಡೆದಿದೆ ಎಂದು ಎಪಿಎಂಸಿ ಮಾಜಿ ಸದಸ್ಯ ಅರುಣ್‌ ಪರಮೇಶ್ವರ್‌ ಆರೋಪಿಸಿದರು. ಈ ಸಂಬಂಧ ತಮ್ಮ ಬಳಿ ದಾಖಲೆಗಳಿದ್ದು, ಅವುಗಳನ್ನು ಮುಖ್ಯಮಂತ್ರಿಗೆ ಸಲ್ಲಿಸುವುದಾಗಿ ತಿಳಿಸಿದರು.

ಸ್ವಂತ ಮನೆಗಾಗಿ ಹಮಾಲಿಗಳ ಅಳಲು

ಸ್ಥಳೀಯ ವ್ಯಾಪಾರಿ ಮಹಿಳೆಯರೊಂದಿಗೆ ಮುಖ್ಯಮಂತ್ರಿ ಚರ್ಚೆ ನಡೆಸಿ, ಸ್ವಂತ ಮನೆ ಅಥವಾ ನಿವೇಶನ ಇದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯರು, 25ರಿಂದ 30 ವರ್ಷಗಳಿಂದ ಬೆಂಗಳೂರಿನಲ್ಲಿ ದುಡಿಯುತ್ತಿದ್ದರೂ ಸ್ವಂತ ಮನೆ ಹೊಂದಿಲ್ಲ ಎಂದು ಅಳಲು ತೋಡಿಕೊಂಡರು.

ಹಲವು ವರ್ಷಗಳಿಂದ ಮನೆ ಅಥವಾ ನಿವೇಶನಕ್ಕಾಗಿ ಮನವಿ ಮಾಡುತ್ತಿದ್ದರೂ ಸೌಲಭ್ಯ ದೊರೆತಿಲ್ಲ. ಪ್ರತಿ ತಿಂಗಳು ₹5ರಿಂದ ₹6 ಸಾವಿರ ಬಾಡಿಗೆ ಪಾವತಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸರ್ಕಾರ ಉಚಿತ ವಿದ್ಯುತ್‌ ನೀಡುತ್ತಿದೆ ಎಂದು ಕೆಲವರು ಹೇಳಿದಾಗ, ‘ಫ್ರೀ ಕರೆಂಟ್‌ ಕೊಡುತ್ತಿರುವವರು ಯಾರು?’ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ಕೆಲವರು ‘ನೀವೇ’, ಇನ್ನು ಕೆಲವರು ‘ಸಿದ್ದರಾಮಯ್ಯ’ ಹಾಗೂ ಮತ್ತಷ್ಟು ಮಂದಿ ‘ಕಾಂಗ್ರೆಸ್‌ ಸರ್ಕಾರ’ ಎಂದು ಉತ್ತರಿಸಿದರು. ಇದರಿಂದ ಮುಖ್ಯಮಂತ್ರಿ ನಗೆ ಬೀರಿದರು.

ಗೃಹಲಕ್ಷ್ಮಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಸಿಗುತ್ತಿದೆಯೇ ಎಂದು ವಿಚಾರಿಸಿದಾಗ, ಕೆಲವರು ಹಣ ಬರುತ್ತಿದೆ ಎಂದರೆ, ಇನ್ನು ಕೆಲವರು ಮೂರು ತಿಂಗಳಿಂದ ಹಣ ಬಂದಿಲ್ಲ ಎಂದು ತಿಳಿಸಿದರು.

ಬಾಲಕಾರ್ಮಿಕರ ವಿರುದ್ಧ ಕ್ರಮಕ್ಕೆ ಸೂಚನೆ

ಎಪಿಎಂಸಿಯಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಿರುವ ಕುರಿತು ಮಹಿಳೆಯರು ಮುಖ್ಯಮಂತ್ರಿಗೆ ದೂರು ನೀಡಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಮಕ್ಕಳಿಂದ ಕೂಲಿ ಕೆಲಸ ಮಾಡಿಸುವುದು ಕಾನೂನುಬಾಹಿರವಾಗಿದ್ದು, ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದರು.

ಸಂಜೆಯೊಳಗೆ ಬಾಲಕಾರ್ಮಿಕ ಪದ್ಧತಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲಾ ಸಚಿವರು ಎಪಿಎಂಸಿಗಳಿಗೆ ಭೇಟಿ ನೀಡಲಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರೈತರು, ವರ್ತಕರು ಹಾಗೂ ಹಮಾಲಿಗಳ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದ್ದು, ಮಾರುಕಟ್ಟೆಯಲ್ಲಿ ಹಲವು ಮೂಲಸೌಕರ್ಯಗಳ ಕೊರತೆ ಕಂಡುಬಂದಿದೆ ಎಂದು ಹೇಳಿದರು.

ಮಕ್ಕಳನ್ನು ಕೂಲಿ ಕೆಲಸಕ್ಕೆ ಬಳಸುವ ಪದ್ಧತಿಯನ್ನು ತಕ್ಷಣ ನಿಲ್ಲಿಸಬೇಕು. ರೈತರು ಹಾಗೂ ಕಾರ್ಮಿಕರಿಗೆ ನ್ಯಾಯ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲ ಸಚಿವರು ಎಪಿಎಂಸಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಬೇಕು. ಸಣ್ಣ ಪ್ರಮಾಣದಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡುವ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ಎಪಿಎಂಸಿಯನ್ನು ದಾಸನಪುರಕ್ಕೆ ಸ್ಥಳಾಂತರಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನಿನ ವಿಚಾರಗಳನ್ನು ಈ ಸಂದರ್ಭದಲ್ಲಿ ಚರ್ಚಿಸುವುದಿಲ್ಲ. ಮೊದಲು ರೈತರು ಮತ್ತು ವರ್ತಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದರು.

ಮುಖ್ಯಮಂತ್ರಿಯವರು ಯಾವುದೇ ಪೂರ್ವ ಮಾಹಿತಿ ನೀಡದೆ ದಿಢೀರ್‌ ಭೇಟಿ ನೀಡಿದ್ದು, ಈ ವೇಳೆ ಕೃಷಿ ಮಾರುಕಟ್ಟೆ ಸಚಿವರು ಅಥವಾ ಕೃಷಿ ಸಚಿವರು ಸ್ಥಳದಲ್ಲಿರಲಿಲ್ಲ. ಕೆಲ ಅಧಿಕಾರಿಗಳು ಮಾತ್ರ ಹಾಜರಿದ್ದರು. ಹಿರಿಯ ಅಧಿಕಾರಿಗಳು ಕೂಡ ಮುಖ್ಯಮಂತ್ರಿ ಆಗಮಿಸಿದ ಬಳಿಕ ಸ್ಥಳಕ್ಕೆ ಆಗಮಿಸಿದ್ದು ಕಂಡುಬಂತು.

RELATED ARTICLES
spot_img

Latest News