ಬೆಂಗಳೂರು,ಸೆ.24- ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ವಿಬಿ-ಜಿರಾಮ್ಜಿ ಯೋಜನೆಯಡಿ 1.60 ಕೋಟಿ ಮಾನವ ದಿನಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಖಂಡ್ರೆ ವಿಧಾನಸಭೆಗೆ ತಿಳಿಸಿದರು. ಬರ ಕುರಿತ ವಿಶೇಷ ಚರ್ಚೆಯಲ್ಲಿ ಬಿಜೆಪಿ ಶಾಸಕ ವಿ.ಸುನೀಲ್ಕುಮಾರ್ರವರು ವಿಬಿ-ಜಿರಾಮ್ಜಿ ಯೋಜನೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ಆ ಕಾರ್ಯವಾಗಿಲ್ಲ ಎಂದು ಆಕ್ಷೇಪಿಸಿದರು.
ಆಗ ಮಧ್ಯಪ್ರವೇಶಿಸಿದ ಸಚಿವರು, ಕೃಷಿ ಹೊಂಡ, ಚೆಕ್ ಡ್ಯಾಂ ನಿರ್ಮಾಣ, ಕೆರೆಗಳ ಹೂಳೆತ್ತುವುದು, ಕೆರೆಗಳ ಪುನಶ್ಚೇತನ, ಅಂತರ್ಜಲ ಹೆಚ್ಚಳದಂತಹ ಕಾಮಗಾರಿಗಳು ಸೇರಿದಂತೆ 318 ಕಾಮಗಾರಿಗಳನ್ನು ಈ ವರ್ಷ ವಿಬಿ-ಜಿರಾಮ್ಜಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ. 2,900 ಕೋಟಿ ರೂ.ಗಳನ್ನು ಇದಕ್ಕಾಗಿ ಒದಗಿಸಲಾಗುತ್ತಿದೆ. 1 ಸಾವಿರ ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಮುಂಗಡವಾಗಿ ನೀಡಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಲಾ 1,700 ಕೋಟಿ ರೂ.ಗಳನ್ನು ಬಳಸಲಾಗುತ್ತಿದೆ. ಮನ್ರೇಗಾ ಯೋಜನೆಯನ್ನು ಬದಲಾಯಿಸಿ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಕಡಿತಗೊಳಿಸಿದೆ. ಆದರೆ ಯಾರೂ ಗುಳೆ ಹೋಗದಂತೆ ರಾಜ್ಯ ಸರ್ಕಾರ ಜನರಿಗೆ ಉದ್ಯೋಗ ನೀಡಲು ಕ್ರಮ ಕೈಗೊಂಡಿದ್ದು ಎಸ್ಓಪಿಯನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ ಎಂಬ ಆರೋಪ ಸರಿಯಲ್ಲ ಎಂದರು.
ಈ ಯೋಜನೆಯಡಿ ಹಣ ಬಿಡುಗಡೆ ಕುರಿತಂತೆ ದೂರುಗಳು ಇದ್ದು, ಅವುಗಳನ್ನು ಸರಿಪಡಿಸಿದ ನಂತರ ಹಣ ಮಂಜೂರಾಗುತ್ತದೆ ಎಂದರು.ಮಧ್ಯಪ್ರವೇಶಿಸಿದ ಬಿ.ಆರ್.ಪಾಟೀಲ್ರವರು ಗುಜರಾತ್ ಮತ್ತು ರಾಜಸ್ಥಾನ ಸರ್ಕಾರಗಳು ಈ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕಲು ಕಾರಣವೇನು? ಎಂದು ಪ್ರಶ್ನಿಸಿದರು. ಆಗ ಸಚಿವರು ಆ ರಾಜ್ಯಗಳು ಈ ಯೋಜನೆಯನ್ನು ಒಪ್ಪಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಹೇಳಿದರು.
