ನವದೆಹಲಿ, ಸೆ.25- ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೆ ಬಂದು 12 ವರ್ಷಗಳಾದರೂ ಉತ್ಪಾದನೆ, ಹೂಡಿಕೆ, ಉದ್ಯೋಗ ಹಾಗೂ ರಫ್ತು ಕ್ಷೇತ್ರಗಳಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಂಡುಬಂದಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಕುರಿತು ಟಿಸಿಎ ಶರದ್ ರಾಘವನ್ ಅವರು ಹಂಚಿಕೊಂಡಿರುವ ಅಂಕಿ-ಅಂಶ ಆಧಾರಿತ ವಿಶ್ಲೇಷಣೆಯನ್ನು ಉಲ್ಲೇಖಿಸಿರುವ ಜೈರಾಮ್ ರಮೇಶ್, ಖಾಸಗಿ ಹೂಡಿಕೆಯಲ್ಲಿ ನಿರೀಕ್ಷಿಸಿದ್ದ ದೊಡ್ಡ ಪ್ರಮಾಣದ ಏರಿಕೆ ಸಂಭವಿಸಿಲ್ಲ ಮತ್ತು ವ್ಯಾಪಕ ಉದ್ಯೋಗ ಸೃಷ್ಟಿಯಲ್ಲೂ ಕೊರತೆ ಇದೆ ಎಂದು ಹೇಳಿದ್ದಾರೆ.
ವಿಶ್ಲೇಷಣೆಯ ಪ್ರಕಾರ, ಕಳೆದ 12 ವರ್ಷಗಳಲ್ಲಿ ಉತ್ಪಾದನಾ ಕ್ಷೇತ್ರದ ಬೆಳವಣಿಗೆ ಹಲವು ಸಂದರ್ಭಗಳಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆಗಿಂತ ನಿಧಾನವಾಗಿದೆ. 2025-26ರಲ್ಲಿ ಒಟ್ಟು ಆರ್ಥಿಕ ಮೌಲ್ಯವರ್ಧನೆಯಲ್ಲಿ ಉತ್ಪಾದನಾ ಕ್ಷೇತ್ರದ ಪಾಲು, 2014ರಲ್ಲಿ ಮೇಕ್ ಇನ್ ಇಂಡಿಯಾ ಆರಂಭವಾದ ಸಂದರ್ಭಕ್ಕಿಂತ ಮೊದಲ ಯೋಜನೆಯ ಪದ್ದತಿಯ ಪ್ರಕಾರ ಕಡಿಮೆಯಾಗಿದೆ. ಹೊಸ ಯೋಜನೆಯಲ್ಲಿ ಸುಮಾರು ಒಂದು ಶೇಕಡಾ ಅಂಕದಷ್ಟು ಮಾತ್ರ ಸುಧಾರಣೆ ಕಂಡುಬಂದಿದೆ. ರಫ್ತು ಕ್ಷೇತ್ರದಲ್ಲೂ ಮೇಕ್ ಇನ್ ಇಂಡಿಯಾನ ಪರಿಣಾಮ ಸೀಮಿತವಾಗಿದೆ ಎಂದು ವಿಶ್ಲೇಷಣೆಯಲ್ಲಿ ಹೇಳಲಾಗಿದೆ.
ತೈಲೇತರ ರಫ್ತುಗಳು ಹೆಚ್ಚಾಗಿದ್ದರೂ, ಈ ಬೆಳವಣಿಗೆ ಯೋಜನೆ ಜಾರಿಗೆ ಬರುವ ಮುನ್ನವೂ ಕಂಡುಬಂದಿತ್ತು. ಜಾಗತಿಕ ಸರಕು ರಫ್ತಿನಲ್ಲಿ ಭಾರತದ ಪಾಲು ಸುಮಾರು 2012ರಿಂದ ಬಹುತೇಕ ಸ್ಥಿರವಾಗಿದೆ ಎಂದು ತಿಳಿಸಲಾಗಿದೆ.
ಖಾಸಗಿ ವಲಯದ ಸ್ಥಿರ ಬಂಡವಾಳ ಹೂಡಿಕೆಯ ಪಾಲು ಒಟ್ಟು ದೇಶೀಯ ಉತ್ಪನ್ನದಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ. ವಿದೇಶಿ ನೇರ ಹೂಡಿಕೆಯಲ್ಲೂ ಉತ್ಪಾದನಾ ಕ್ಷೇತ್ರಕ್ಕೆ ಹರಿದುಬಂದ ಹೂಡಿಕೆಯ ಬೆಳವಣಿಗೆ ಕಳೆದ 12 ವರ್ಷಗಳಲ್ಲಿ ಏಳು ವರ್ಷಗಳಲ್ಲಿ ಒಟ್ಟು ವಿದೇಶಿ ನೇರ ಹೂಡಿಕೆಯ ಬೆಳವಣಿಗೆಗಿಂತ ನಿಧಾನವಾಗಿತ್ತು ಎಂದು ವಿಶ್ಲೇಷಣೆ ತಿಳಿಸಿದೆ.
ದೇಶದ ಕಾರ್ಖಾನೆಗಳ ಉತ್ಪಾದನಾ ಸಾಮರ್ಥ್ಯದ ಬಳಕೆ ಸುಧಾರಿಸುತ್ತಿದ್ದರೂ, ಹೊಸ ಹೂಡಿಕೆಗಳನ್ನು ಉತ್ತೇಜಿಸುವ ಮಟ್ಟವೆಂದು ಪರಿಗಣಿಸಲಾಗುವ ಶೇಕಡ 80ರ ಗಡಿಯನ್ನು ಇನ್ನೂ ದಾಟಿಲ್ಲ ಎಂದು ಹೇಳಲಾಗಿದೆ.
ಉದ್ಯಮ ಕ್ಷೇತ್ರಕ್ಕೆ ಬ್ಯಾಂಕ್ ಸಾಲದ ಪ್ರಮಾಣ ಮೂರು ವಿಭಾಗಗಳಲ್ಲೂ ಏರಿಕೆಯಾಗುತ್ತಿದೆ. ಆದರೆ ವೇಗವಾದ ಬೆಳವಣಿಗೆ ಅಥವಾ ದೊಡ್ಡ ಪ್ರಮಾಣದ ಹೊಸ ಹೂಡಿಕೆಗಳ ಕೊರತೆಯ ಹಿನ್ನೆಲೆಯಲ್ಲಿ, ಕಂಪನಿಗಳು ಈ ಸಾಲವನ್ನು ಮುಖ್ಯವಾಗಿ ದೈನಂದಿನ ಕಾರ್ಯಾಚರಣೆಯ ಬಂಡವಾಳಕ್ಕಾಗಿ ಬಳಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ವಿಶ್ಲೇಷಣೆಯಲ್ಲಿ ಉಲ್ಲೇಖಿಸಲಾಗಿದೆ.
ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹಧನ ಯೋಜನೆಗಳು ಕೆಲವು ಸಕಾರಾತಕ ಫಲಿತಾಂಶಗಳನ್ನು ನೀಡಿದ್ದು, 2026ರ ಮಾರ್ಚ್ ವೇಳೆಗೆ ಒಟ್ಟು 2.4 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಿಸಿವೆ. ಆದರೆ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಬಹುಪಾಲು ಕೆಲವೇ ಕೆಲವು ಕ್ಷೇತ್ರಗಳಿಗೆ ಸೀಮಿತವಾಗಿದೆ ಎಂದು ತಿಳಿಸಲಾಗಿದೆ.
ಉತ್ಪಾದನಾ ಕ್ಷೇತ್ರದ ಉದ್ಯೋಗದ ವಿಚಾರದಲ್ಲೂ ಗಮನಾರ್ಹ ಏರಿಕೆ ಕಂಡುಬಂದಿಲ್ಲ. 2016-17ರಲ್ಲಿ ಸುಮಾರು 5.1 ಕೋಟಿ ರೂ. ಇದ್ದ ಉತ್ಪಾದನಾ ಕ್ಷೇತ್ರದ ಉದ್ಯೋಗಿಗಳ ಸಂಖ್ಯೆ 2025-26ರಲ್ಲಿ ಸುಮಾರು 5.3 ಕೋಟಿ ರೂ.ಗೆ ಮಾತ್ರ ಏರಿಕೆಯಾಗಿದೆ.
ಒಟ್ಟು ಉದ್ಯೋಗದಲ್ಲಿ ಉತ್ಪಾದನಾ ಕ್ಷೇತ್ರದ ಪಾಲು ಕೂಡ ಒಂದು ದಶಕದ ಹಿಂದೆ ಇದ್ದ ಮಟ್ಟದಲ್ಲೇ ಬಹುತೇಕ ಉಳಿದಿದೆ ಎಂದು ವಿಶ್ಲೇಷಣೆ ತಿಳಿಸಿದೆ.ಈ ಅಂಕಿ-ಅಂಶಗಳು ಮೇಕ್ ಇನ್ ಇಂಡಿಯಾ ಯೋಜನೆಯ 12 ವರ್ಷಗಳ ಕಾರ್ಯಕ್ಷಮತೆಯ ಕುರಿತು ಚರ್ಚೆಗೆ ಕಾರಣವಾಗಿವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
