Homeರಾಜ್ಯದಸರಾ ಮಾದರಿಯಲ್ಲಿ ಹಾಸನಾಂಬ ಜಾತ್ರೆ ಆಚರಣೆ : ಸಚಿವ ಶಿವಲಿಂಗೇಗೌಡ

ದಸರಾ ಮಾದರಿಯಲ್ಲಿ ಹಾಸನಾಂಬ ಜಾತ್ರೆ ಆಚರಣೆ : ಸಚಿವ ಶಿವಲಿಂಗೇಗೌಡ

ಹಾಸನ, ಸೆ.27- ಹಾಸನಾಂಬ ದೇವಿಯ ದರ್ಶನೋತ್ಸವ ಹಾಗೂ ಶ್ರೀ ಸಿದ್ಧೇಶ್ವರ ಸ್ವಾಮಿ ಜಾತ್ರಾಮಹೋತ್ಸವವನ್ನು ಈ ಬಾರಿ ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಹಾಸನ ಜಿಲ್ಲೆಯ ಹಬ್ಬ ಎಂಬ ಪರಿಕಲ್ಪನೆಯಲ್ಲಿ ದಸರಾ ಮಾದರಿಯಲ್ಲಿ ಆಚರಿಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ಹಾಸನಾಂಬ ಜಾತ್ರೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅ.29ರಿಂದ ನ.11ರವರೆಗೆ ಜಾತ್ರಾಮಹೋತ್ಸವ ನಡೆಯಲಿದ್ದು, ಅ.30ರಿಂದ ನ.10ರವರೆಗೆ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಭಕ್ತರಿಗೆ ಸುಗಮ ದರ್ಶನ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದರು.

ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸ್ಥಳೀಯ ಕಲಾವಿದರು, ಜಾನಪದ ಕಲಾ ತಂಡಗಳು ಹಾಗೂ ಕ್ರೀಡಾ ಪ್ರತಿಭೆಗಳಿಗೆ ಜಾತ್ರೆಯಲ್ಲಿ ವೇದಿಕೆ ಕಲ್ಪಿಸಲಾಗುವುದು. ಸೋಬಾನೆ ಹಾಡು, ರಂಗಗೀತೆ, ನಾಟಕ, ಜಾನಪದ ಕಲೆ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಗಳಿಗೆ ಆದ್ಯತೆ ನೀಡುವ ಕುರಿತು ಚಿಂತನೆ ನಡೆದಿದೆ. ಕನಕಪುರದ ಕನಕೋತ್ಸವದ ಮಾದರಿಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಎತ್ತುಗಳ ಪ್ರದರ್ಶನಕ್ಕೂ ಅವಕಾಶ: ಹಾಸನ ಜಿಲ್ಲೆಯ ಗ್ರಾಮೀಣ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಉತ್ತಮ ತಳಿಯ ಎತ್ತು, ಹಸು ಹಾಗೂ ಜಾನುವಾರುಗಳ ಪ್ರದರ್ಶನ ಏರ್ಪಡಿಸಿ, ರೈತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ನೀಡುವ ಕುರಿತು ಚಿಂತನೆ ನಡೆದಿದೆ. ಬಾಣವಾರ ಭಾಗದ ಎತ್ತಿನ ಓಟ ಸೇರಿದಂತೆ ಗ್ರಾಮೀಣ ಕ್ರೀಡೆಗಳಿಗೂ ಅವಕಾಶ ಕಲ್ಪಿಸುವ ಸಾಧ್ಯತೆ ಪರಿಶೀಲಿಸಲಾಗುವುದು ಎಂದರು.

ಕ್ರಿಕೆಟ್‌ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಾಗುವುದು. ಹಾಸನಾಂಬ ದೇವಿಯ ಚಿತ್ರವಿರುವ ಸ್ಮರಣಿಕೆಗಳನ್ನು ಸ್ಪರ್ಧಾಳುಗಳಿಗೆ ನೀಡುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಹೇಳಿದರು.

ಗುಣಮಟ್ಟದ ವ್‌ಯವಸ್ಥೆಗೆ ಆದ್ಯತೆ: ಜಾತ್ರೆಯ ವಿವಿಧ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ದೇವರ ಹಣದ ದುರುಪಯೋಗ ಅಥವಾ ಅನಗತ್ಯ ದುಂದುವೆಚ್ಚಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಸಿಸಿ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆಯುವ ಬದಲು ಶಾಶ್ವತವಾಗಿ ಅಳವಡಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುವುದು ಎಂದರು.

ಶಾಸಕ ಎಚ್‌.ಎಸ್‌‍. ಪ್ರಕಾಶ್‌ ಮಾತನಾಡಿ, ಕಳೆದ ವರ್ಷ ಲಕ್ಷಾಂತರ ಭಕ್ತರು ಆಗಮಿಸಿದರೂ ಯಾವುದೇ ಅನಾಹುತವಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯೂ ಅಧಿಕಾರಿಗಳು ತಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು. ವೃದ್ಧರು, ಅಂಗವಿಕಲರು ಹಾಗೂ ತಾಯಿಮಕ್ಕಳಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕೆ.ಎಸ್‌‍. ಲತಾ ಕುಮಾರಿ, ಜಿಪಂ ಸಿಇಒ ಶುಭಂ ಶುಕ್ಲ, ಎಸ್ಪಿ ಶುಭನ್ವಿತಾ, ಡಿಸಿಎಫ್‌ ಸೌರಭ್‌ ಕುಮಾರ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
spot_img

Latest News