Homeರಾಜಕೀಯದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿದ ಸಿಎಂ ಡಿಕೆಶಿ, ಮಹತ್ವದ ಮಾತುಕತೆ

ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿದ ಸಿಎಂ ಡಿಕೆಶಿ, ಮಹತ್ವದ ಮಾತುಕತೆ

ನವದೆಹಲಿ, ಸೆ.29- ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಗೂ ಮುನ್ನ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರೊಂದಿಗೆ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸಿದರು.

ದೆಹಲಿಯ ಭಾರತ್‌ ಜೋಡೋ ಭವನದಲ್ಲಿ ಬೆಳಿಗ್ಗೆ ಎಐಸಿಸಿ ಕಾರ್ಯಕಾರಿ ಸಮಿತಿಯ ಮಹತ್ವದ ಸಭೆ ನಡೆದಿದ್ದು, ಅದಕ್ಕೂ ಮುನ್ನ ಡಿ.ಕೆ. ಶಿವಕುಮಾರ್‌ ಅವರು ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಹಾಗೂ ರಾಜ್ಯ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ. ತಾವು ಮುಖ್ಯಮಂತ್ರಿಯಾದ ಬಳಿಕ ಕೈಗೊಂಡಿರುವ ಹಲವು ನಿರ್ಧಾರಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ಡಿ.ಕೆ. ಶಿವಕುಮಾರ್‌ ಅವರು ರಾಹುಲ್‌ ಗಾಂಧಿ ಅವರಿಗೆ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 100 ಕಾಂಗ್ರೆಸ್‌‍ ಕಚೇರಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದ ಸಮಯ ನಿಗದಿ ಬಗ್ಗೆಯೂ ಇದೇ ಸಂದರ್ಭದಲ್ಲಿ ಪ್ರಸ್ತಾಪವಾಗಿದೆ. ಭಾರತ್‌ ಜೋಡೋ ಪಾದಯಾತ್ರೆಯ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌‍ ಸೋಲು ಕಂಡ 84 ಕ್ಷೇತ್ರಗಳಲ್ಲಿ ಪಕ್ಷದ ವತಿಯಿಂದ ಭಾರತ್‌ ಜೋಡೋ 2.0 ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ವಿವರಿಸಿದ್ದಾರೆ ಎನ್ನಲಾಗಿದೆ.

ಕಳೆದ ಚುನಾವಣೆಯಲ್ಲಿ ಸೋಲು ಕಂಡ ಕ್ಷೇತ್ರಗಳ ಪೈಕಿ ಕನಿಷ್ಠ 40 ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವ ಗುರಿಯನ್ನು ಪಕ್ಷ ಹೊಂದಿದೆ ಎಂಬ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದಾರೆ. ರಾಜ್ಯ ಸರ್ಕಾರದ ಇತ್ತೀಚಿನ ನಿರ್ಧಾರಗಳ ಬಗ್ಗೆಯೂ ರಾಹುಲ್‌ ಗಾಂಧಿ ಅವರಿಗೆ ಮಾಹಿತಿ ನೀಡಲಾಗಿದೆ. ಜಾತಿ ರಹಿತವಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌‍ ಪಾಸ್‌‍, ಪ್ರಜಾ ಸೇವೆ ಎಂಬ ಹೊಸ ಇಲಾಖೆ ಸ್ಥಾಪನೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಸರ್ಕಾರ ಕೈಗೊಂಡಿರುವುದಾಗಿ ಡಿ.ಕೆ. ಶಿವಕುಮಾರ್‌ ವಿವರಿಸಿದ್ದಾರೆ.

ರಾಜ್ಯ ಸರ್ಕಾರದ ಆಡಳಿತ ವೈಖರಿ ಕುರಿತು ರಾಹುಲ್‌ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದ ವಿಶೇಷ ತೀವ್ರ ಪರಿಷ್ಕರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಮಾತುಕತೆ ವೇಳೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಕೂಡ ಉಪಸ್ಥಿತರಿದ್ದರು.

RELATED ARTICLES
spot_img

Latest News