ಜಪಾನ್, ಸೆ. 29- ಐಚಿ-ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಟ್ರ್ಯಾಪ್ ಸ್ಪರ್ಧೆಯಲ್ಲಿ ಜಿಂದ್ ಮೂಲದ 26 ವರ್ಷದ ನೀರು ಧಾಂಡಾ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಐಚಿ ಪ್ರಿಫೆಕ್ಚರಲ್ ಜನರಲ್ ಶೂಟಿಂಗ್ ಗ್ಯಾಲರಿಯಲ್ಲಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ನೀರು ಧಾಂಡಾ ಮಹಿಳೆಯರ ಟ್ರ್ಯಾಪ್ ಫೈನಲ್‌ನಲ್ಲಿ ಪ್ರಾಬಲ್ಯ ಮೆರೆದರು.
ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ವಿಭಾಗದಲ್ಲಿ ವಿಶ್ವಕಪ್ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೆಲವೇ ತಿಂಗಳುಗಳ ಬಳಿಕ ಇದೀಗ ಏಷ್ಯನ್ ಗೇಮ್ಸ್‌ನಲ್ಲೂ ಅಗ್ರಸ್ಥಾನಕ್ಕೇರಿದ್ದಾರೆ.
ಏಷ್ಯನ್ ಗೇಮ್ಸ್‌ನ ಮಹಿಳೆಯರ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾರತಕ್ಕೆ ಲಭಿಸಿದ ಮೊದಲ ವೈಯಕ್ತಿಕ ಚಿನ್ನದ ಪದಕ ಇದಾಗಿದೆ. ಭಾರತೀಯ ಮಹಿಳಾ ತಂಡದೊಂದಿಗೆ ಬೆಳ್ಳಿ ಪದಕ ಗೆದ್ದ ಬಳಿಕ ನೀರು ಈ ವೈಯಕ್ತಿಕ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸವಾಲಿನ ಪರಿಸ್ಥಿತಿಗಳಲ್ಲಿ ಐದು ಸುತ್ತುಗಳ ಮೂಲಕ ಶೂಟರ್‌ಗಳ ಕೌಶಲ್ಯವನ್ನು ಪರೀಕ್ಷಿಸುವ ಮೂರು ದಿನಗಳ ಅರ್ಹತಾ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಸ್ಥಿರತೆಯನ್ನು ಕಾಯ್ದುಕೊಂಡ ಅವರು, 125ಕ್ಕೆ 118 ಅಂಕಗಳೊಂದಿಗೆ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು.
ಫೈನಲ್‌ನಲ್ಲಿ ನೀರು 30ಕ್ಕೆ 28 ಅಂಕಗಳನ್ನು ಗಳಿಸಿ, ಹಿಂದಿನ ಏಷ್ಯನ್ ದಾಖಲೆಯನ್ನು ನಾಲ್ಕು ಅಂಕಗಳ ಅಂತರದಿಂದ ಉತ್ತಮಪಡಿಸಿದರು. ಚೀನಾದ ಸುನ್ ಯುನಾಂಗ್ 30ಕ್ಕೆ 26 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರೆ, ಕುವೈತ್‌ನ ಹಜಾರ್ ಅಬ್ದುಲಲಿಕ್ 25ಕ್ಕೆ 21 ಅಂಕಗಳೊಂದಿಗೆ ಕಂಚಿನ ಪದಕ ಪಡೆದರು.
ಅಂತಿಮ ಸರಣಿಯನ್ನು ಪ್ರವೇಶಿಸುವಾಗ ನೀರು ಎರಡು ಅಂಕಗಳ ಮುನ್ನಡೆಯನ್ನು ಹೊಂದಿದ್ದರು. ಅತ್ಯಂತ ನಿರ್ಣಾಯಕ ಕ್ಷಣದಲ್ಲಿ ಅವರು ಐದು ಶಾಟ್‌ಗಳ ಪರಿಪೂರ್ಣ ಸರಣಿಯನ್ನು ಸಿಡಿಸಿ, ಸುನ್ ಯುನಾಂಗ್ ಅವರನ್ನು ಹಿಂದಿಕ್ಕಿದರು.
ಒಂದೇ ದಿನದಲ್ಲಿ ಹಲವು ದಾಖಲೆ:
- 2026ರ ಏಷ್ಯನ್ ಗೇಮ್ಸೌನಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಬಂಗಾರದ ಪದಕ ವಿಜೇತೆ.
- ಪದಕ ಸುತ್ತಿನಲ್ಲಿ 30 ಅಂಕಗಳಿಗೆ 28 ಅಂಕ ಪಡೆದು ಹಿಂದಿನ ಏಷ್ಯನ್ ದಾಖಲೆ ಅಳಿಸುವಿಕೆ.
- ಮಹಿಳೆಯರ ಟ್ರ್ಯಾಪ್ ವಿಭಾಗದಲ್ಲಿ ಬೆಳ್ಳಿ ಮಿಂಚು ಹರಿಸಿದ ಒಂದೇ ಗಂಟೆ ಅಂತರದಲ್ಲಿ ಬಂಗಾರ ಬೇಟೆ.
