ಬೆಂಗಳೂರು,ಸೆ.29- ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ(ಎಸ್ಐಆರ್) ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ, ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿ ಯಾಗಿಸಿಕೊಂಡು ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುತ್ತಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ಸ್ಪಷ್ಟಪಡಿಸಿವೆ.
ಎಸ್ಐಆರ್ ಪ್ರಕ್ರಿಯೆ ನಿಗದಿತ ನಿಯಮಗಳು ಮತ್ತು ಚುನಾವಣಾ ಕಾನೂನಿನ ಪ್ರಕಾರವೇ ನಡೆಯುತ್ತಿದ್ದು, ಅರ್ಹ ಮತದಾರರು ಆತಂಕಪಡುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಆಯೋಗದ ಅಧಿಕಾರಿಗಳು ನೀಡಿದ್ದಾರೆ.
ನಿಯಮಬದ್ಧ ಪ್ರಕ್ರಿಯೆ:
ಚುನಾವಣಾ ಆಯೋಗದ ನಿಯಮಗಳು ಮತ್ತು ತಂತ್ರಾಂಶದ ಮಾರ್ಗಸೂಚಿಗಳ ಅನ್ವಯವೇ ಎಸ್ಐಆರ್ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ತಾರ್ಕಿಕ ಅಸಂಗತತೆಗಳು ವಯಸ್ಸಿನ ವ್ಯತ್ಯಾಸಗಳು ಅಥವಾ ದಾಖಲೆಗಳ ಕೊರತೆ ಇರುವ ನಮೂನೆಗಳನ್ನು ಗುರುತಿಸಿ ಸಂಬಂಧಪಟ್ಟ ಮತದಾರರಿಗೆ ನೋಟೀಸ್ ನೀಡಲಾಗಿದೆ.
ನೋಟೀಸ್ಪಡೆದವರು ಅಗತ್ಯ ಪೂರಕ ದಾಖಲೆಗಳನ್ನು ಒದಗಿಸಲು ಕಾಲಾವಕಾಶ ನೀಡಲಾಗಿದ್ದು, ದಾಖಲೆಗಳನ್ನು ನೀಡದವರ ಹೆಸರುಗಳನ್ನು ಮಾತ್ರ ನಿಯಮಾನುಸಾರ ಪಟ್ಟಿಯಿಂದ ಕೈಬಿಡಲಾಗುತ್ತದೆ. ಈವರೆಗೂ ಯಾವುದೇ ಅರ್ಹ ಹಾಗೂ ನಿಜವಾದ ಮತದಾರರ ಹೆಸರನ್ನು ರಾಜಕೀಯ ಒತ್ತಡಕ್ಕೋ ಅಥವಾ ದುರುದ್ದೇಶದಿಂದಲೋ ಅನಗತ್ಯವಾಗಿ ಪಟ್ಟಿಯಿಂದ ತೆಗೆದುಹಾಕಿಲ್ಲ ಎಂದು ಆಯೋಗದ ಉನ್ನತ ಮೂಲಗಳು ಖಚಿತಪಡಿಸಿವೆ.
ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಹೆಸರು ಕಾಣಿಸದಿರುವುದು ತಕ್ಷಣವೇ ಅಂತಿಮವಾಗಿ ಮತದಾನದ ಹಕ್ಕು ಕಳೆದುಕೊಂಡಿರುವುದನ್ನು ಅರ್ಥೈಸುವುದಿಲ್ಲ. ಮತದಾರರ ವಿವರಗಳಲ್ಲಿ ವ್ಯತ್ಯಾಸ, ಸ್ಥಳಾಂತರ, ಮರಣ, ನಕಲಿ ನೋಂದಣಿ ಸೇರಿದಂತೆ ವಿವಿಧ ಕಾರಣಗಳಿಂದ ಪರಿಶೀಲನೆಗೆ ಒಳಪಡಿಸಿದ ಪ್ರಕರಣಗಳಲ್ಲಿ ಅಗತ್ಯ ಪ್ರಕ್ರಿಯೆ ಅನುಸರಿಸಲಾಗುತ್ತಿದೆ. ದಾಖಲೆ ಅಥವಾ ವಿವರಗಳ ಕುರಿತು ಸ್ಪಷ್ಟನೆ ಅಗತ್ಯವಿರುವವರಿಗೆ ನೋಟೀಸ್ ನೀಡಲಾಗುತ್ತಿದ್ದು, ನಿಗದಿತ ಪ್ರಕ್ರಿಯೆಯಡಿ ಪೂರಕ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ನೋಟೀಸ್ಗೆ ಅಗತ್ಯ ದಾಖಲೆಗಳನ್ನು ಸಲ್ಲಿಸದಿರುವುದು ಅಥವಾ ಅರ್ಹತೆಯನ್ನು ಸಾಬೀತುಪಡಿಸಲು ಸಾಧ್ಯವಾಗದಿರುವ ಸಂದರ್ಭದಲ್ಲಿ ಮಾತ್ರ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯೋಗದ ಮೂಲಗಳು ತಿಳಿಸಿವೆ. ಯಾವುದೇ ವ್ಯಕ್ತಿಯ ಹೆಸರನ್ನು ಸಮುದಾಯ, ಧರ್ಮ ಅಥವಾ ರಾಜಕೀಯ ಹಿನ್ನೆಲೆಯ ಆಧಾರದ ಮೇಲೆ ತೆಗೆದುಹಾಕುವ ವ್ಯವಸ್ಥೆ ಇಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ. ನಿರ್ದಿಷ್ಟ ಸಮುದಾಯದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಯಾವುದೇ ರಾಜಕೀಯ ಪಕ್ಷದಿಂದ ಚುನಾವಣಾ ಅಧಿಕಾರಿಗಳಿಗೆ ಸೂಚನೆ ಅಥವಾ ಒತ್ತಡ ಬಂದಿಲ್ಲ ಎಂದು ಆಯೋಗದ ಮೂಲಗಳು ಸ್ಪಷ್ಟಪಡಿಸಿವೆ.
ಕರ್ನಾಟಕದಲ್ಲಿ ಜೂನ್ 16ರಂದು ಮತದಾರರ ಪಟ್ಟಿಯನ್ನು ಸ್ಥಗಿತಗೊಳಿಸಿದಾಗ 5,54,32,314 ಮತದಾರರು ಇದ್ದರು. ಆಗಸ್ಟ್ 24ರಂದು ಪ್ರಕಟವಾದ ಎಸ್ಐಆರ್ ಕರಡು ಪಟ್ಟಿಯಲ್ಲಿ 4,46,80,151 ಮತದಾರರು ದಾಖಲಾಗಿದ್ದರು. ಸುಮಾರು 1,07,96,415 ಮಂದಿಯನ್ನು ಎಸ್ಡಿಡಿಒ- ಆಬ್ಸೆಂಟ್, ಶಿಫ್ಟೆಡ್, ಡೆಡ್, ಡ್ಯೂಪ್ಲಿಕೇಟ್ ಅಂಡ್ ಅದರ್ರಸ ವರ್ಗಕ್ಕೆ ಸೇರಿಸಲಾಗಿತ್ತು.
ಈ ಭಾರೀ ಸಂಖ್ಯೆಯೇ ಪ್ರಸ್ತುತ ರಾಜಕೀಯ ವಿವಾದದ ಪ್ರಮುಖ ಕಾರಣವಾಗಿದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಅರ್ಹ ಮತದಾರರ ಹೆಸರುಗಳೂ ಹೊರಗುಳಿದಿರುವ ಸಾಧ್ಯತೆ ಇದೆ ಎಂದು ಆರೋಪಿಸಿವೆ. ಸೆಪ್ಟೆಂಬರ್ 26ರಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಎಸ್ಐಆರ್ ಪ್ರಕ್ರಿಯೆ ಕುರಿತು ಆಕ್ಷೇಪ ವ್ಯಕ್ತಪಡಿಸಿತ್ತು ಆದರೆ ಚುನಾವಣಾ ಪ್ರಕ್ರಿಯೆಯ ದೃಷ್ಟಿಯಿಂದ ಕರಡು ಪಟ್ಟಿಯಿಂದ ಹೊರಗಿರುವುದು ಅಂತಿಮ ಅಳಿಸುವಿಕೆ ಅಲ್ಲ ಎಂಬುದು ಮಹತ್ವದ ಅಂಶ.
ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಆಕ್ಷೇಪಣೆ ಸಲ್ಲಿಸುವುದರ ಜೊತೆಗೆ ಅರ್ಹರು ಫಾರ್ಮ್-6 ಮೂಲಕ ತಮ ಹೆಸರನ್ನು ಸೇರಿಸಲು ಅರ್ಜಿ ಸಲ್ಲಿಸಬಹುದಾಗಿತ್ತು.
ಸೆಪ್ಟೆಂಬರ್ 23ರಂದು ಹಕ್ಕು-ಆಕ್ಷೇಪಣೆ ಅವಧಿ ಮುಕ್ತಾಯಗೊಂಡ ವೇಳೆಗೆ ಆರು ಲಕ್ಷಕ್ಕೂ ಅಧಿಕ ಮತದಾರರು ಫಾರ್ಮ್-6 ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿದೆ. ಈ ಅರ್ಜಿಗಳನ್ನು ಚುನಾವಣಾ ನೋಂದಣಾಧಿಕಾರಿಗಳು ಪರಿಶೀಲಿಸಿದ ಬಳಿಕ ಅಂತಿಮ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಅಂತಿಮ ಎಸ್ಐಆರ್ ಮತದಾರರ ಪಟ್ಟಿ ಅಕ್ಟೋಬರ್ 27ರಂದು ಪ್ರಕಟವಾಗುವ ನಿರೀಕ್ಷೆಯಿದೆ.
