Homeಬೆಂಗಳೂರು11 ಕೋಟಿ ರೂ. ವೌಲ್ಯದ ಡ್ರಗ್ಸ್ ವಶ : ವಿದೇಶಿ ಪ್ರಜೆ ಸೇರಿ 6 ಮಂದಿ...

11 ಕೋಟಿ ರೂ. ವೌಲ್ಯದ ಡ್ರಗ್ಸ್ ವಶ : ವಿದೇಶಿ ಪ್ರಜೆ ಸೇರಿ 6 ಮಂದಿ ಪೆಡ್ಲರ್‌ಗಳ ಬಂಧನ

ಬೆಂಗಳೂರು,ಸೆ.29-ನಗರದ ಗಿರಿನಗರ, ಹೆಬ್ಬಾಳ ಹಾಗೂ ವಿದ್ಯಾರಣ್ಯಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಿದೇಶಿ ಪ್ರಜೆ ಸೇರಿದಂತೆ 6 ಮಂದಿ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ 10.96 ಕೋಟಿ ರೂ. ಮೌಲ್ಯದ ಮಾದಕ ವಸ್ತು ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.ಗಿರಿನಗರ ಠಾಣೆ ಪೊಲೀಸರು ವಿದೇಶಿ ಪ್ರಜೆ ಸೇರಿ ಮೂವರನ್ನು ಬಂಧಿಸಿ 8.64 ಕೋಟಿ ಮೌಲ್ಯದ 4 ಕೆಜಿ 320 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ನೈಜೀರಿಯಾದ ಜೋಸಿಯಾ ಅಬೆಲ್‌ (26), ಕೇರಳದ ಜಾಫರ್‌ (35) ಹಾಗೂ ಆಶಿಕ್‌ (32) ಬಂಧಿತರು. ಹೆಬ್ಬಾಳ ಠಾಣೆ ಪೊಲೀಸರು ಒಡಿಶಾ ಮೂಲದ ಮಹಿಳೆ ಬನಿತಾ ಕರನ್‌ ಎಂಬಾಕೆಯನ್ನು ಬಂಧಿಸಿ 2.10 ಕೋಟಿ ಮೌಲ್ಯದ 1 ಕೆಜಿ 54 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ವಿದ್ಯಾರಣ್ಯಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಟನ್‌ ಶಾಪ್‌ವೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಜಾಲವನ್ನು ಬೇಧಿಸಿ ಕೆಆರ್‌ ಪುರಂ ನಿವಾಸಿಗಳಾದ ಜುನೈದ್‌ ಪಾಷ (30) ಮತ್ತು ರಿಜ್ವಾನ್‌ ಖಾನ್‌ (30) ಎಂಬುವವರನ್ನು ಬಂಧಿಸಿ 21.20 ಲಕ್ಷ ರೂ. ಮೌಲ್ಯದ 106 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಬ್ಬರು ಆರೋಪಿಗಳು ನೈಜೀರಿಯಾ ಪ್ರಜೆಯೊಬ್ಬರಿಂದ ಡ್ರಗ್ಸ್ ತರಿಸಿಕೊಂಡು ಮಟನ್‌ ಶಾಪನ್ನೇ ಮಾರಾಟದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.ಈ ಠಾಣೆಗಳ ವ್ಯಾಪ್ತಿಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಠಾಣೆಗಳಲ್ಲಿ ಎನ್‌ಡಿಪಿಎಸ್‌‍ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ.

ದಾಳಿ ಸಂದರ್ಭದಲ್ಲಿ ಒಬ್ಬ ವಿದೇಶಿ ಪ್ರಜೆ, ಮೂವರು ಹೊರರಾಜ್ಯದವರು ಹಾಗೂ ಇಬ್ಬರು ಸ್ಥಳೀಯರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶ, ಹೊರರಾಜ್ಯ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ತಿಳಿಸಿದ್ದಾರೆ.

ಒಟ್ಟಾರೆ ಆರೋಪಿಗಳಿಂದ ಒಟ್ಟು 5 ಕೆಜಿ 480 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದು, ಈ ಆರೋಪಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆಕಾರ್ಯ ಮುಂದುವರೆದಿದೆ. ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ಗಳಾದ ಮಂಜುನಾಥ್‌.ಎಸ್‌‍, ಭೈರ ಹಾಗೂ ಮಂಜುನಾಥ್‌ ಕೆ.ಆರ್‌ ಅವರನ್ನೊಳಗೊಂಡ ಸಿಬ್ಬಂದಿ ತಂಡವು ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.

RELATED ARTICLES
spot_img

Latest News