ಬೆಂಗಳೂರು,ಸೆ.29- ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ರಕ್ತದೊತ್ತಡ(ಬಿಪಿ) ಹಾಗೂ ಸಣ್ಣ ವಯಸ್ಸಿನಲ್ಲೇ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳಿಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಉಪ್ಪು ಬಳಕೆ ಮತ್ತು ಸೇವನೆಯನ್ನು ನಿಯಂತ್ರಿಸಲು ಸಮಗ್ರ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಇತ್ತೀಚಿನ ವರ್ಷಗಳಲ್ಲಿ ಯುವಜನತೆಯಲ್ಲೂ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಬದಲಾದ ಜೀವನಶೈಲಿ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿನ ಅತಿಯಾದ ಉಪ್ಪಿನ (ಸೋಡಿಯಂ) ಅಂಶವೇ ಪ್ರಮುಖ ಕಾರಣ ಎಂಬುದು ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಸಾಮಾನ್ಯ ಸಾರ್ವಜನಿಕರಿಂದ ಹಿಡಿದು ಶಾಲೆಗಳು, ಹೋಟೆಲ್‌ಗಳು ಹಾಗೂ ಆಹಾರ ತಯಾರಿಕಾ ಸಂಸ್ಥೆಗಳಿಗೆ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಾವಳಿಗಳನ್ನು ಪ್ರಕಟಿಸಿದೆ.
ಸಾರ್ವಜನಿಕರಿಗೆ ವೈಯಕ್ತಿಕ ಜಾಗೃತಿ
- ಒಬ್ಬ ವ್ಯಕ್ತಿ ದಿನಕ್ಕೆ 5 ಗ್ರಾಂ ಗಿಂತ ಕಡಿಮೆ ಉಪ್ಪನ್ನು ಮಾತ್ರ ಸೇವಿಸಬೇಕು, ಊಟ ಮಾಡುವಾಗ ರುಚಿ ನೋಡದೆ ಮೇಲಿಂದ ಉಪ್ಪು ಹಾಕಿಕೊಳ್ಳುವ ಅಭ್ಯಾಸ ಬಿಡಬೇಕು. ಅಡುಗೆಯಲ್ಲಿ ಹಾಗೂ ಉಪ್ಪಿನಕಾಯಿ, ಚಟ್ನಿ, ಸ್ನಾಕ್ಸ್ ತಯಾರಿಕೆಯಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಇರಲಿ, ಸಂಸ್ಕರಿಸಿದ ಮತ್ತು ರೆಡಿ-ಟು-ಈಟ್ ಆಹಾರ ಕೊಳ್ಳುವಾಗ ಲೇಬಲ್‌ನಲ್ಲಿರುವ ಸೋಡಿಯಂ ಅಂಶವನ್ನು ಪರಿಶೀಲಿಸಿ ಖರೀದಿಸಬೇಕು, ಪೋಷಕರು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕಡಿಮೆ ಉಪ್ಪು ಬಳಕೆಯ ಆಹಾರದ ಅಭ್ಯಾಸ ಬೆಳೆಸಬೇಕು, ಬಿಪಿ ಅಥವಾ ಕಿಡ್ನಿ ತೊಂದರೆ ಇರುವವರು ಉಪ್ಪನ್ನು ಬಳಸುವ ಮುನ್ನ ಕಡ್ಡಾಯವಾಗಿ ವೈದ್ಯರ ಸಲಹೆ ಪಡೆಯಬೇಕು ಎಂದು ಸಲಹೆ ಮಾಡಿದೆ.
- ಹೋಟೆಲ್, ರೆಸ್ಟೋರೆಂಟ್ ಹಾಗೂ ಸ್ಟ್ರೀಟ್ ಫುಡ್ ಮಾರಾಟಗಾರರಿಗೆ ಗ್ರಾಹಕರ ಮೇಜಿನ ಮೇಲೆ(ಡೈನಿಂಗ್ ಟೇಬಲ್) ನೇರವಾಗಿ ಉಪ್ಪಿನ ಡಬ್ಬಿ ಇಡುವ ಪದ್ಧತಿಯನ್ನು ಬಿಡಬೇಕು, ಅಡುಗೆಯಲ್ಲಿ ಹಂತ-ಹಂತವಾಗಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವ ಪ್ರಮಾಣಿತ ಪದ್ಧತಿ ಅಳವಡಿಸಿಕೊಳ್ಳಬೇಕು ಹಾಗೂ ಅಡುಗೆಯವರಿಗೆ ಈ ಬಗ್ಗೆ ಸೂಕ್ತ ತರಬೇತಿ ನೀಡಬೇಕು, ಗ್ರಾಹಕರಿಗೆ ಜಾಗೃತಿ ಮೂಡಿಸಲು ಉಪ್ಪು ಕಡಿಮೆ ಬಳಸಿ ಎಂಬ ಸಂದೇಶಗಳನ್ನು ಪ್ರದರ್ಶಿಸಬೇಕು.
- ಶಾಲೆ ಮತ್ತು ಕಾಲೇಜುಗಳಿಗೆ ನೀಡುವ ಮಧ್ಯಾಹ್ನದ ಬಿಸಿಊಟ ಹಾಗೂ ಕ್ಯಾಂಟೀನ್ ಸ್ನಾಕ್ಸ್ ನಲ್ಲಿ ಉಪ್ಪಿನ ಬಳಕೆಯನ್ನು ಕಡಿತಗೊಳಿಸಬೇಕು. ಶಾಲಾ ಆರೋಗ್ಯ ಕಾರ್ಯಕ್ರಮಗಳ ಮೂಲಕ ಮಕ್ಕಳು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಿ, ಮನೆಯಲ್ಲೂ ಕಡಿಮೆ ಉಪ್ಪಿನ ಆಹಾರ ಪದ್ಧತಿ ಬೆಳೆಸಲು ಪ್ರೇರೇಪಿಸಬೇಕು.
- ಆಹಾರ ಮತ್ತು ಉಪ್ಪು ತಯಾರಿಕಾ ಸಂಸ್ಥೆಗಳಿಗೆ
ಸೋಡಿಯಂ ಕಡಿತ: ಆಹಾರ ಪ್ಯಾಕೇಜ್‌್ಡ ತಯಾರಕರು ತಮ ಉತ್ಪನ್ನಗಳಲ್ಲಿ ಸೋಡಿಯಂ ಪ್ರಮಾಣವನ್ನು ಹಂತ-ಹಂತವಾಗಿ ಕಡಿಮೆ ಮಾಡಬೇಕು.
ಎಫ್.ಎಸ್.ಎಸ್.ಎ.ಐ ಮಾನದಂಡ:
ಎಲ್ಲಾ ಉಪ್ಪು ತಯಾರಕರು ಎಫ್‌ಎಸ್‌ಎಸ್‌ಎಐ ಮಾನದಂಡಗಳಿಗೆ ಬದ್ಧರಾಗಿರಬೇಕು ಹಾಗೂ ಲೇಬಲ್‌ನಲ್ಲಿ ಪೌಷ್ಟಿಕಾಂಶ ಮತ್ತು ಮುನ್ನೆಚ್ಚರಿಕಾ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕು.
ರಾಜ್ಯದಲ್ಲಿ ಉಪ್ಪಿನ ಅತಿಯಾದ ಬಳಕೆಯಿಂದ ಉಂಟಾಗುತ್ತಿರುವ ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಈ ಮಾರ್ಗಸೂಚಿ ಪ್ರಮುಖ ಪಾತ್ರವಹಿಸಲಿದ್ದು, ಪ್ರತಿಯೊಬ್ಬ ನಾಗರಿಕರು ಇದನ್ನು ತಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಉಪ್ಪು ತಯಾರಕರಿಗೂ ಹೊಸ ಜವಾಬ್ದಾರಿ
ಉಪ್ಪು ಉತ್ಪಾದನಾ ಘಟಕಗಳು ಕಡಿಮೆ ಸೋಡಿಯಂ ಹೊಂದಿರುವ ಅಥವಾ ಐಯೋಡೈಸ್ಡ್ ಲೋ-ಸೋಡಿಯಂ ಉಪ್ಪು ಉತ್ಪಾದನೆಗೆ ಮುಂದಾಗಬೇಕು ಎಂದು ಇಲಾಖೆ ಸಲಹೆ ನೀಡಿದೆ. ಇಂತಹ ಉತ್ಪನ್ನಗಳು ಆಹಾರ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರಬೇಕು. ಉತ್ಪನ್ನದ ಸಂಯೋಜನೆ, ಬಳಕೆ ವಿಧಾನ ಹಾಗೂ ಮುನ್ನೆಚ್ಚರಿಕೆಗಳನ್ನು ಲೇಬಲ್‌ನಲ್ಲಿ ಸ್ಪಷ್ಟವಾಗಿ ನಮೂದಿಸುವಂತೆ ಸೂಚಿಸಲಾಗಿದೆ.
ಕಡಿಮೆ ಸೋಡಿಯಂ ಉಪ್ಪಿನ ಪರ್ಯಾಯಗಳಿಗೆ ಸಂಬಂಧಿಸಿದ ಮಾನದಂಡಗಳನ್ನು ಈಗಾಗಲೇ ರೂಪಿಸಲಾಗಿದೆ. 2017ರಲ್ಲೇ ಉಪ್ಪಿನ ಪರ್ಯಾಯಗಳು ಮತ್ತು ಕಡಿಮೆ/ಅತಿ ಕಡಿಮೆ ಸೋಡಿಯಂ ಹೊಂದಿರುವ ವಿಶೇಷ ಆಹಾರಗಳ ಗುಣಮಟ್ಟ ಹಾಗೂ ಲೇಬಲಿಂಗ್‌ಗೆ ಸಂಬಂಧಿಸಿದ ನಿಯಮಗಳನ್ನು ಎಫ್.ಎಸ್.ಎಸ್.ಎ.ಐ ಅಧಿಸೂಚಿಸಿತ್ತು. ಆದರೆ ಕಡಿಮೆ ಸೋಡಿಯಂ ಉಪ್ಪನ್ನು ಎಲ್ಲರೂ ಸ್ವತಂತ್ರವಾಗಿ ಬಳಸಬೇಕು ಎಂದರ್ಥವಲ್ಲ. ವಿಶೇಷವಾಗಿ ಕಿಡ್ನಿ ಸಮಸ್ಯೆ ಸೇರಿದಂತೆ ಕೆಲವು ಆರೋಗ್ಯ ಪರಿಸ್ಥಿತಿಗಳಲ್ಲಿ ಪೊಟ್ಯಾಸಿಯಂ ಒಳಗೊಂಡ ಉಪ್ಪಿನ ಪರ್ಯಾಯಗಳು ಸೂಕ್ತವಾಗಿರದಿರಬಹುದು. ಆದ್ದರಿಂದ ಇಂತಹ ಪರ್ಯಾಯಗಳನ್ನು ಬಳಸುವ ಮೊದಲು ವೈದ್ಯಕೀಯ ಸಲಹೆ ಪಡೆಯುವಂತೆ ಸೂಚಿಸಲಾಗಿದೆ.
