ಬೆಂಗಳೂರು,ಸೆ.29- ಜೆಪಿನಗರ 9ನೇ ಹಂತದ ಅಂಜನಾಪುರ ಪ್ರದೇಶದಲ್ಲಿ ಇಂದು ಮುಂಜಾನೆ ಚಿರತೆಯ ಓಡಾಟ ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ರಾತ್ರಿ ಸುಮಾರು 2:10ರ ಸುಮಾರಿಗೆ ಚಿರತೆ ವಸತಿ ಪ್ರದೇಶದ ಮೂಲಕ ಹಾದುಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಥಳೀಯರ ಪ್ರಕಾರ, ಸ್ವತಂತ್ರ ಮನೆಗಳು ಮತ್ತು ಅಪಾರ್ಟೆಂಟ್ ಸಂಕೀರ್ಣಗಳನ್ನು ಹೊಂದಿರುವ ಅಂಜನಾಪುರದ 7ನೇ ಬ್ಲಾಕ್‌ನಲ್ಲಿ ಒಂಟಿ ಚಿರತೆ ಕಂಡುಬಂದಿದೆ. ಕನಕಪುರ ರಸ್ತೆಯ ತಾತಗುಣಿ ಬಳಿಯಿರುವ ರೋರಿಚ್ ದೇವಿಕಾರಾಣಿ ಎಸ್ಟೇಟ್‌ನಿಂದ ಚಿರತೆ ಬಂದಿರುವ ಸಾಧ್ಯತೆಯೇ ಹೆಚ್ಚು. ರೋರಿಚ್ ದೇವಿಕರಾಣಿ ಎಸ್ಟೇಟ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಹಲವಾರು ಚಿರತೆಗಳ ಆವಾಸಸ್ಥಾನವಾಗಿವೆ.
ಅವುಗಳಲ್ಲಿ ಕೆಲವು ಆಗಾಗ್ಗೆ ನೈಸ್ ರಸ್ತೆಯನ್ನು ದಾಟಿ ಅಂಜನಾಪುರದ ವಸತಿ ಪ್ರದೇಶಗಳಿಗೆ ಪ್ರವೇಶಿಸುತ್ತವೆ. ಇಲ್ಲಿಯವರೆಗೆ ಅವು ಯಾರಿಗೂ ಹಾನಿ ಮಾಡಿಲ್ಲ; ಸಾಮಾನ್ಯವಾಗಿ ಅವು ಅಲೆದಾಡುವ ಪ್ರಾಣಿಗಳನ್ನು ಬೇಟೆಯಾಡಿ ಎಸ್ಟೇಟ್‌ಗೆ ಮರಳುತ್ತವೆ ಎಂದು ಬೆಂಗಳೂರು ನಗರ ಅರಣ್ಯ ವಿಭಾಗದ ಕಗ್ಗಲೀಪುರ ವಲಯದ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ಪ್ರದೇಶದಲ್ಲಿರುವ ಖಾಲಿ ನಿವೇಶನಗಳು ಮತ್ತು ದಟ್ಟವಾದ ಸಸ್ಯವರ್ಗವು ವನ್ಯಜೀವಿಗಳನ್ನು ಆಕರ್ಷಿಸುತ್ತಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಬಿ.ಎಂ.ಕಾವಲ್ ಮತ್ತು ರೋರಿಚ್ ದೇವಿಕಾರಾಣಿ ಎಸ್ಟೇಟ್ ಅರಣ್ಯ ಪ್ರದೇಶಗಳಿಂದ ಬರುವ ವನ್ಯಜೀವಿಗಳಿಗೆ, ಈ ನಿವೇಶನಗಳಲ್ಲಿ ಬೆಳೆದಿರುವ ದಟ್ಟವಾದ ಪೊದೆಗಳು ಸೂಕ್ತ ಆವಾಸಸ್ಥಾನವನ್ನು ಒದಗಿಸುತ್ತವೆ. ತುರಹಳ್ಳಿಯಿಂದ ಚಿರತೆಯೊಂದು ಇಷ್ಟು ದೂರ ಬರುವುದು ಅಸಾಧ್ಯ, ಏಕೆಂದರೆ ಅದು ಜನನಿಬಿಡ ಪ್ರದೇಶಗಳ ಮೂಲಕ ಹಾದುಹೋಗಬೇಕಾಗುತ್ತದೆ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಈ ಪ್ರದೇಶದಲ್ಲಿ ನಿಗಾ ಮತ್ತು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಸುತ್ತಮುತ್ತಲಿನ ನಿವಾಸಿಗಳು ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಎಚ್ಚರಿಕೆಯಿಂದಿರಲು ಹಾಗೂ ಮನೆಯೊಳಗೇ ಇರುವಂತೆ ಸೂಚಿಸಿದ್ದಾರೆ.
