ದೊಮ್ಮಸಂದ್ರದಲ್ಲಿ (ಬೆಂಗಳೂರು) ಆರಂಭಗೊಂಡಿರುವ 2,000 ಚದರ ಅಡಿಯ ಹೊಸ ಅನುಭವ ಕೇಂದ್ರವು ಜರ್ಮನ್ ಎಂಜಿನಿಯರಿಂಗ್ ನೈಪುಣ್ಯದ ಸರ್ಫೇಸ್, ಪೀಠೋಪಕರಣ ಹಾಗೂ ಒಳಾಂಗಣ ಪರಿಹಾರಗಳನ್ನು ಬೆಂಗಳೂರಿನ ವಿನ್ಯಾಸ ಮತ್ತು ಉತ್ಪಾದನಾ ಸಮುದಾಯಕ್ಕೆ ಇನ್ನಷ್ಟು ಹತ್ತಿರವಾಗಿಸಲಿದೆ.
ಸೆಪ್ಟೆಂಬರ್ 28, ಬೆಂಗಳೂರು: ರೆಹೌ ಇಂಡಿಯಾ ತನ್ನ ಭಾರತದ ಎರಡನೇ ‘ಹೌಸ್ ಆಫ್ ರೆಹೌ’ವನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದು, ದೇಶದ ಅತ್ಯಂತ ಪ್ರಮುಖ ಪೀಠೋಪಕರಣ ಮತ್ತು ಒಳಾಂಗಣ ಮಾರುಕಟ್ಟೆಗಳಲ್ಲಿ ಒಂದಾದ ಈ ನಗರದಲ್ಲಿ ತನ್ನ ಚಿಲ್ಲರೆ ವ್ಯಾಪಾರ ಉಪಸ್ಥಿತಿಯನ್ನು ಬಲಪಡಿಸಿದೆ. ದೊಮ್ಮಸಂದ್ರದ ವರ್ತೂರು–ಸರ್ಜಾಪುರ ರಸ್ತೆಯಲ್ಲಿರುವ ಈ 2,000 ಚದರ ಅಡಿಯ ಹೌಸ್ ಆಫ್ ರೆಹೌ, ಕಂಪನಿಯ ಜರ್ಮನ್ ಎಂಜಿನಿಯರಿಂಗ್ ನೈಪುಣ್ಯದ ಸರ್ಫೇಸ್, ಪೀಠೋಪಕರಣ ಹಾಗೂ ಒಳಾಂಗಣ ಪರಿಹಾರಗಳನ್ನು ಒಂದೇ ಸೂರಿನಡಿ ತಂದಿದೆ.
ಬೃಹತ್ ಸ್ವರೂಪದ ಅನುಭವ ಕೇಂದ್ರವಾಗಿ ವಿನ್ಯಾಸಗೊಂಡಿರುವ ಬೆಂಗಳೂರಿನ ಹೌಸ್ ಆಫ್ ರೆಹೌ, ಸಾಂಪ್ರದಾಯಿಕ ಶೋರೂಂ ಸ್ವರೂಪವನ್ನು ಬಹಳ ಹಿಂದಿಕ್ಕಿದೆ. ಇಲ್ಲಿನ ಅನ್ವಯ ಆಧಾರಿತ ಪ್ರದರ್ಶನ ವಲಯಗಳು, ಉತ್ಪನ್ನಗಳನ್ನು ಒಳಾಂಗಣ ಪರಿಸರದಲ್ಲಿಯೇ ಅನುಭವಿಸಲು ಹಾಗೂ ಅವುಗಳ ನೋಟದ ಜೊತೆಗೆ ಸ್ಪರ್ಶ, ಕಾರ್ಯಕ್ಷಮತೆ ಮತ್ತು ಫಿನಿಶ್ ಅನ್ನು ಹೆಚ್ಚು ವಾಸ್ತವಿಕ ಸಂದರ್ಭದಲ್ಲಿ ಪರಿಶೀಲಿಸಲು ಸಂದರ್ಶಕರಿಗೆ ಅವಕಾಶ ನೀಡುತ್ತವೆ. ಪ್ರತ್ಯೇಕ ಉತ್ಪನ್ನಗಳು ಒಟ್ಟಾಗಿ ಸೇರಿ ಸಂಪೂರ್ಣ ಒಳಾಂಗಣವನ್ನು ಹೇಗೆ ರೂಪಿಸುತ್ತವೆ ಎಂಬುದರ ಸ್ಪಷ್ಟ ಅರಿವಿನೊಂದಿಗೆ ಗ್ರಾಹಕರು ನಿರ್ಧಾರ ಕೈಗೊಳ್ಳಲು ನೆರವಾಗುವುದೇ ಇದರ ಉದ್ದೇಶ.
ಹೊಸ ಹೌಸ್ ಆಫ್ ರೆಹೌ ಕಂಪನಿಯ ಪ್ರಮುಖ ಒಳಾಂಗಣ ವಿಭಾಗಗಳನ್ನು ಒಂದೆಡೆ ತಂದಿದೆ. ರೌಕಾಂಟೆಕ್ಸ್ (RAUKANTEX) ಎಡ್ಜ್ಬ್ಯಾಂಡ್ಗಳು ಸೊಗಸಾದ ಎಡ್ಜ್ ಫಿನಿಶಿಂಗ್ನ ಜೊತೆಗೆ ಪೀಠೋಪಕರಣಗಳ ಅತ್ಯುತ್ತಮ ಕಾರ್ಯಕ್ಷಮತೆಗೆ ಪರಿಹಾರಗಳನ್ನು ಒದಗಿಸುತ್ತವೆ. ರೌವಿಸಿಯೊ (RAUVISIO) ಸರ್ಫೇಸ್ಗಳು ಅಡುಗೆಮನೆ, ವಾರ್ಡ್ರೋಬ್, ಪೀಠೋಪಕರಣ ಮತ್ತು ಒಳಾಂಗಣ ಅನ್ವಯಗಳಿಗೆ ವ್ಯಾಪಕ ಶ್ರೇಣಿಯ ಅಲಂಕಾರಿಕ ಹಾಗೂ ಕ್ರಿಯಾತ್ಮಕ ಸರ್ಫೇಸ್ ಸಾಧ್ಯತೆಗಳನ್ನು ತೆರೆದಿಡುತ್ತವೆ. ರೌವೊಲೆಟ್ (RAUVOLET) ರೋಲರ್ ಶಟರ್ ವ್ಯವಸ್ಥೆಗಳು ಸ್ಮಾರ್ಟ್ ಮತ್ತು ಸ್ಥಳ ಉಳಿತಾಯದ ಶೇಖರಣಾ ಪರಿಹಾರಗಳನ್ನು ಪರಿಚಯಿಸಿದರೆ, ರೌವಾರಿಯೊ (RAUVARIO) ಪ್ಲಿಂತ್ ವ್ಯವಸ್ಥೆಗಳು ಹಾಗೂ ರೌಕಾರ್ಡ್ (RAUCORD) ವೀವಿಂಗ್ ಸಾಮಗ್ರಿಗಳು ಸಮಕಾಲೀನ ಮನೆಗಳಿಗೆ, ವಿಶೇಷವಾಗಿ ಅಡುಗೆಮನೆಗಳಿಗೆ ಅಚ್ಚುಕಟ್ಟಾದ ಮತ್ತು ಪ್ರಾಯೋಗಿಕ ಅಡಿಪಾಯವನ್ನು ಒದಗಿಸುತ್ತವೆ. ಸಂದರ್ಶಕರು ಈ ವಿಭಾಗಗಳ ಜೊತೆಗೆ ಇತರ ರೆಹೌ ಪೀಠೋಪಕರಣ ಮತ್ತು ಒಳಾಂಗಣ ಪರಿಹಾರಗಳನ್ನೂ ಇದೇ ಜಾಗದಲ್ಲಿ ಅನುಭವಿಸಬಹುದು.
ಬೆಂಗಳೂರಿನ ಈ ಕೇಂದ್ರವನ್ನು ವಿಶಾಲ ವರ್ಗದ ಗ್ರಾಹಕವರ್ಗಕ್ಕಾಗಿ ವಿನ್ಯಾಸಗೊಳಿಸಲಾಗಿದೆ – ಮನೆಮಾಲೀಕರು, ವಾಸ್ತುಶಿಲ್ಪಿಗಳು, ಒಳಾಂಗಣ ವಿನ್ಯಾಸಕರು, ಪೀಠೋಪಕರಣ ತಯಾರಕರು, ಒಇಎಂಗಳು ಹಾಗೂ ವಸತಿ ಮತ್ತು ವಾಣಿಜ್ಯ ಯೋಜನೆಗಳಲ್ಲಿ ತೊಡಗಿರುವ ವೃತ್ತಿಪರರು ಇದರಲ್ಲಿ ಸೇರಿದ್ದಾರೆ. ಮನೆ ನವೀಕರಣದ ಯೋಜನೆ ರೂಪಿಸುತ್ತಿರುವ ಮನೆಮಾಲೀಕರೊಬ್ಬರು ಸರ್ಫೇಸ್, ಶೇಖರಣಾ ವ್ಯವಸ್ಥೆ, ಎಡ್ಜ್ಬ್ಯಾಂಡ್, ವೀವಿಂಗ್ ಪರಿಹಾರ ಮತ್ತು ಪ್ಲಿಂತ್ಗಳನ್ನು ಒಟ್ಟಿಗೆ ಪರಿಶೀಲಿಸಬಹುದು. ವಿನ್ಯಾಸಕರು ಫಿನಿಶ್ ಮತ್ತು ಅನ್ವಯಗಳನ್ನು ಮೌಲ್ಯಮಾಪನ ಮಾಡಬಹುದು. ಪೀಠೋಪಕರಣ ವೃತ್ತಿಪರರು ಸಾಮಗ್ರಿ ಮತ್ತು ವ್ಯವಸ್ಥೆಗಳನ್ನು ಅವುಗಳ ನೈಜ ಬಳಕೆಗೆ ಹತ್ತಿರವಾದ ಪರಿಸರದಲ್ಲಿಯೇ ಪರಿಶೀಲಿಸಬಹುದು.
ರೆಹೌ ಇಂಟೀರಿಯರ್ ಸೊಲ್ಯೂಷನ್ಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ. ಥಾಮಸ್ ಟ್ರೋಗರ್ ಅವರೂ ಉದ್ಘಾಟನೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹೌಸ್ ಆಫ್ ರೆಹೌ ಹಿಂದಿನ ತಮ್ಮ ದೂರದೃಷ್ಟಿ ಮತ್ತು ಪರಿಕಲ್ಪನೆಯ ಕುರಿತು ಮಾತನಾಡಿದ ಅವರು, “ಎಲ್ಲ ಮಾರುಕಟ್ಟೆಗಳಲ್ಲಿಯೂ ಒಳಾಂಗಣ ಉದ್ಯಮವು ಸಾಮಗ್ರಿ, ಕಾರ್ಯಕ್ಷಮತೆ ಮತ್ತು ವಿನ್ಯಾಸದ ವಿಚಾರದಲ್ಲಿ ಹೆಚ್ಚು ಸಮಗ್ರ ವಿಧಾನದತ್ತ ಸಾಗುತ್ತಿದೆ. ಪರಿಹಾರಗಳು ಒಂದು ಸಂಪೂರ್ಣ ವ್ಯವಸ್ಥೆಯಾಗಿ ಒಟ್ಟಾಗಿ ಕೆಲಸ ಮಾಡಬೇಕೆಂದು ಗ್ರಾಹಕರು ಈಗ ಹೆಚ್ಚು ಹೆಚ್ಚಾಗಿ ನಿರೀಕ್ಷಿಸುತ್ತಿದ್ದಾರೆ; ಅದೇ ವೇಳೆ ವಾಸ್ತುಶಿಲ್ಪಿಗಳು ಹಾಗೂ ವಿನ್ಯಾಸಕರು ಮತ್ತು ತಯಾರಕರು, ಪೂರ್ಣಗೊಂಡ ಜಾಗದಲ್ಲಿ ಪ್ರತ್ಯೇಕ ಘಟಕಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಬಗ್ಗೆ ಹೆಚ್ಚಿನ ವಿಶ್ವಾಸವನ್ನು ಬಯಸುತ್ತಿದ್ದಾರೆ. ಹೌಸ್ ಆಫ್ ರೆಹೌ ಹಿಂದಿನ ಚಿಂತನೆಯ ಮಹತ್ವದ ಭಾಗ ಇದುವೇ. ಸರ್ಫೇಸ್, ಪೀಠೋಪಕರಣ ಘಟಕಗಳು ಮತ್ತು ಒಳಾಂಗಣ ವ್ಯವಸ್ಥೆಗಳಲ್ಲಿನ ನಮ್ಮ ಪರಿಣತಿಯನ್ನು, ಈ ಪರಿಹಾರಗಳು ಹೇಗೆ ಒಟ್ಟಾಗಿ ಸೇರುತ್ತವೆ ಎಂಬುದನ್ನು ಜನರು ಪ್ರತ್ಯಕ್ಷವಾಗಿ ಅನುಭವಿಸಬಹುದಾದ ಪರಿಸರದಲ್ಲಿ ನಾವು ಒಂದೆಡೆ ತರುತ್ತಿದ್ದೇವೆ. ಈ ಜಾಗತಿಕ ಅನುಭವ ಜಾಲಕ್ಕೆ ಬೆಂಗಳೂರು ಮಹತ್ವದ ಸೇರ್ಪಡೆಯಾಗಿದೆ. ಇಲ್ಲಿನ ಬಲಿಷ್ಠ ವಿನ್ಯಾಸ ಮತ್ತು ಪೀಠೋಪಕರಣ ಪರಿಸರ ವ್ಯವಸ್ಥೆಯು, ಮುಂದಿನ ಪೀಳಿಗೆಯ ಒಳಾಂಗಣಗಳನ್ನು ರೂಪಿಸುತ್ತಿರುವ ವೃತ್ತಿಪರರು ಹಾಗೂ ಗ್ರಾಹಕರೊಂದಿಗೆ ತೊಡಗಿಸಿಕೊಳ್ಳಲು ರೆಹೌಗೆ ಇದನ್ನು ಸಹಜ ಮಾರುಕಟ್ಟೆಯನ್ನಾಗಿಸಿದೆ” ಎಂದು ಹೇಳಿದರು.
ಉದ್ಘಾಟನೆಯ ಕುರಿತು ಮಾತನಾಡಿದ ರೆಹೌ ಇಂಡಿಯಾ ಮತ್ತು ಸಬ್ಕಾನ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶ್ರೀ ತುಷಾರ್ ವರ್ಮಾ ಅವರು, “ಭಾರತದ ಪೀಠೋಪಕರಣ ಮತ್ತು ಒಳಾಂಗಣ ಉದ್ಯಮದಲ್ಲಿ ಬೆಂಗಳೂರಿಗೆ ವಿಶಿಷ್ಟ ಪಾತ್ರವಿದೆ. ಇಲ್ಲಿ ಪ್ರಮುಖ ಪೀಠೋಪಕರಣ ಉದ್ಯಮಗಳು, ಬಲಿಷ್ಠ ವಿನ್ಯಾಸ ಸಮುದಾಯ ಹಾಗೂ ತಮ್ಮ ಮನೆ ಮತ್ತು ಕಾರ್ಯಸ್ಥಳಗಳಿಗೆ ಹೆಚ್ಚು ಸ್ಮಾರ್ಟ್ ಪರಿಹಾರಗಳನ್ನು ಅನ್ವೇಷಿಸಲು ಸಿದ್ಧರಿರುವ ಗ್ರಾಹಕರು ಒಟ್ಟಿಗೆ ಸೇರಿದ್ದಾರೆ. ಈ ಗ್ರಾಹಕವರ್ಗಕ್ಕೆ ಕೇವಲ ಉತ್ಪನ್ನ ಪ್ರದರ್ಶನಕ್ಕಿಂತ ಹೆಚ್ಚು ಅರ್ಥಪೂರ್ಣವಾದದ್ದನ್ನು ಹೌಸ್ ಆಫ್ ರೆಹೌ ನೀಡಬೇಕೆಂದು ನಾವು ಬಯಸಿದ್ದೆವು. ಜನರು ನಮ್ಮ ಪರಿಹಾರಗಳನ್ನು ಅನ್ವಯದಲ್ಲಿಯೇ ಅನುಭವಿಸಿ, ವಿಭಿನ್ನ ಅಂಶಗಳು ಹೇಗೆ ಒಟ್ಟಾಗಿ ಕೆಲಸ ಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಂಡು ಹೆಚ್ಚಿನ ವಿಶ್ವಾಸದಿಂದ ನಿರ್ಧಾರ ಕೈಗೊಳ್ಳಬಹುದಾದ ತಾಣವನ್ನು ಸೃಷ್ಟಿಸುವುದೇ ನಮ್ಮ ಪರಿಕಲ್ಪನೆಯಾಗಿತ್ತು. ಭಾರತದ ಒಳಾಂಗಣ ಕ್ಷೇತ್ರವನ್ನು ರೂಪಿಸುತ್ತಿರುವ ಮಾರುಕಟ್ಟೆಗಳು ಮತ್ತು ವೃತ್ತಿಪರರಿಗೆ ರೆಹೌ ಅನುಭವವನ್ನು ಹತ್ತಿರವಾಗಿಸುತ್ತಿರುವ ಈ ಉದ್ಘಾಟನೆಯು, ನಮ್ಮ ಚಿಲ್ಲರೆ ವ್ಯಾಪಾರ ವಿಸ್ತರಣೆಯಲ್ಲಿ ಮಹತ್ವದ ಹೆಜ್ಜೆಯನ್ನೂ ಗುರುತಿಸುತ್ತದೆ” ಎಂದರು.
