ಬೆಂಗಳೂರು, ಸೆ.30- ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ರಾಜ್ಯ ಸರ್ಕಾರ ನೀಡುತ್ತಿರುವ ಪ್ರತಿ ಎಕರೆಗೆ 2,500 ರೂ. ಮೊತ್ತವನ್ನು ಟೀಕಿಸುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಿ ಪ್ರತಿ ಎಕರೆಗೆ
50 ಸಾವಿರ ಪರಿಹಾರ ಕೊಡಿಸಲಿ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಸವಾಲು ಹಾಕಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರಿಗೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲಾಗುತ್ತಿಲ್ಲ. ಹೀಗಾಗಿ ಹೊಟ್ಟೆಕಿಚ್ಚಿನಿಂದ ದಿನನಿತ್ಯ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಅವರು ಬ್ಲಾಕ್‌ಮೇಲ್ ರಾಜಕಾರಣ ಮಾಡುತ್ತಿದ್ದಾರೆ, ಹಿಂದೆ ಧರ್ಮಸಿಂಗ್ ಅವರ ಬೆನ್ನಿಗೆ ಚೂರಿ ಹಾಕಿದರು. ಮಾಟಮಂತ್ರ ಮಾಡಿಸಿ ಹೆದರಿಸುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಕೇಂದ್ರದಲ್ಲಿ ಉತ್ತಮ ಖಾತೆಯ ಸಚಿವರಾಗಿರುವ ಕುಮಾರಸ್ವಾಮಿ ಅವರು ತಮ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುವ ಬದಲು ದಿನನಿತ್ಯ ಟೀಕೆ ಮಾಡುತ್ತಾ ಏಕೆ ತಿರುಗಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ನೈಸ್ ಯೋಜನೆ ಆರಂಭಿಸಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು. ಅದರಲ್ಲಿ ಲೋಪಗಳಾಗಿದ್ದರೆ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವುಗಳನ್ನು ಏಕೆ ಸರಿಪಡಿಸಲಿಲ್ಲ ಅಥವಾ ಈ ಬಗ್ಗೆ ಏಕೆ ಮಾತನಾಡಲಿಲ್ಲ? ಎಂದು ಬಾಲಕೃಷ್ಣ ಪ್ರಶ್ನಿಸಿದರು.ನೈಸ್ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಸಹಕಾರ ಸಿಗಲಿಲ್ಲ ಎಂದು ಕುಮಾರಸ್ವಾಮಿ ಈಗ ಹೇಳುತ್ತಿದ್ದಾರೆ. ಹಾಗಿದ್ದರೆ ಆಗಲೇ ರಾಜೀನಾಮೆ ನೀಡಬೇಕಿತ್ತು, ಅಧಿಕಾರದಲ್ಲೇ ಏಕೆ ಮುಂದುವರಿದರು ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಕುಮಾರಸ್ವಾಮಿ ನೀಡಿರುವ ಎಲ್ಲಾ ಆಸ್ತಿ ಮಾಹಿತಿಗಳು ಚುನಾವಣಾ ಆಯೋಗಕ್ಕೆ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಪ್ರಮಾಣಪತ್ರಗಳಲ್ಲೇ ಇವೆ. ಯಾವುದನ್ನೂ ಮುಚ್ಚಿಟ್ಟಿಲ್ಲ. ಜೊತೆಗೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದಿಂದಲೂ ತನಿಖೆ ನಡೆದಿದೆ. ಹೀಗಾಗಿ ಕುಮಾರಸ್ವಾಮಿ ಅವರ ಆರೋಪಗಳು ಹೊಸ ವಿಚಾರವೇನಲ್ಲ ಎಂದು ಹೇಳಿದರು.
ರೈತರ ವಿಚಾರದಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ 2,500 ಪರಿಹಾರವನ್ನು ಟೀಕಿಸುವ ಬದಲು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಿ ರಾಜ್ಯದ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ಪರಿಹಾರ ಕೊಡಿಸಲಿ. ಹಾಗೆ ಮಾಡಿದರೆ ಅವರನ್ನು ಮೆಚ್ಚುತ್ತೇವೆ ಎಂದು ಬಾಲಕೃಷ್ಣ ಹೇಳಿದರು.ಇತರರ ಆಸ್ತಿ ವಿಚಾರವಾಗಿ ಟೀಕೆ ಮಾಡುವ ತಾವು ಗಾಜಿನ ಮನೆಯಲ್ಲಿ ಕುಳಿತಿದ್ದೇವೆ ಎಂಬುದನ್ನು ಮರೆಯಬಾರದು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಸಹೋದರ ಬಾಲಕೃಷ್ಣ ಗೌಡ ಅವರ ಆದಾಯ ಏಕಾಏಕಿ ಒಂದು ಸಾವಿರ ಕೋಟಿ ರೂಪಾಯಿ ಹೆಚ್ಚಾಗಿದ್ದು ಹೇಗೆ ಎಂಬುದರ ಬಗ್ಗೆಯೂ ಪ್ರಶ್ನೆಗಳಿವೆ ಎಂದು ಹೇಳಿದರು.
ಕುಮಾರಸ್ವಾಮಿ ಅವರ ಕುಟುಂಬದ ಆಸ್ತಿ ವಿಚಾರಗಳ ಬಗ್ಗೆಯೂ ತನಿಖೆಯಾಗಲಿ. ಈ ಸಂಬಂಧ ನಾವು ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ ಎಂದು ಬಾಲಕೃಷ್ಣ ತಿಳಿಸಿದರು.ಮಾಜಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು ಇತರರ ಬಗ್ಗೆ ಹಗುರವಾಗಿ ಅಥವಾ ಏಕವಚನದಲ್ಲಿ ಮಾತನಾಡುತ್ತಾರೆ. ನಮಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ. ಅದನ್ನು ಅರಿತುಕೊಳ್ಳಲಿ.
ಹತ್ತು ಸಾವಿರ ಜನರನ್ನು ಕರೆತಂದು ಹೆದ್ದಾರಿ ಬಂದ್ ಮಾಡುತ್ತೇನೆ ಎಂದು ಹೇಳುವುದು ಮಾಜಿ ಮುಖ್ಯಮಂತ್ರಿಯವರ ಘನತೆಗೆ ತಕ್ಕದ್ದಲ್ಲ ಎಂದು ಹೇಳಿದರು.
ನೈಸ್ ವಿಚಾರದಲ್ಲಿ ಅಶೋಕ್ ಖೇಣಿ ಅವರೊಂದಿಗೆ ವ್ಯಾಪಾರಕ್ಕೆ ಯತ್ನಿಸಿದ್ದರು. ಅದು ಸಾಕಾರಗೊಳ್ಳಲಿಲ್ಲ. ಅದಕ್ಕೇ ಈಗ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ದಿನನಿತ್ಯ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ಮಹದಾಯಿ ಹಾಗೂ ಮೇಕೆದಾಟು ಯೋಜನೆಗಳಿಗೆ ಅನುಮೋದನೆ ಕೊಡಿಸಲು ಪ್ರಯತ್ನಿಸಲಿ. ದಿನ ಬೆಳಗಾದರೆ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವ ಮೂಲಕ ಶ್ರೀ ಸಾಮಾನ್ಯರ ಕೆಲಸ ಮಾಡಲು ಬಿಡದೆ ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ತಮಗೆ ಯಾವುದೇ ಬೇಸರವಿಲ್ಲ. ಹೊಸ ಯೋಜನೆಗಳನ್ನು ಕೈಗೊಳ್ಳಲು ಹಣಕಾಸಿನ ಸಮಸ್ಯೆ ಎದುರಾಗುತ್ತಿದೆ ಎಂಬರ್ಥದಲ್ಲಿ ಮಾತನಾಡಿದ್ದೇನೆ. ಆದರೆ ಈಗಾಗಲೇ ಚಾಲ್ತಿಯಲ್ಲಿರುವ ಕಾಮಗಾರಿಗಳು ಹಾಗೂ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ಬಾಲಕೃಷ್ಣ ಹೇಳಿದರು. ಹಾಲಿನ ದರ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಈಗಾಗಲೇ ಸೂಚನೆ ನೀಡಿದ್ದಾರೆ. ಹಾಲಿನ ದರ ಹೆಚ್ಚಳದಿಂದ ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
