ಬೆಂಗಳೂರು, ಸೆ.30- ನಾಪತ್ತೆಯಾಗಿದ್ದ ಗದಗದ ಕೆಆರ್ಐಡಿಎಲ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪರ್ವೇಜ್ ಧಾರವಾಡ ಅವರು ಭೋಪಾಲ್ನಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆಯಾಗದಿರುವುದು ಹಾಗೂ ಗುತ್ತಿಗೆದಾರರಿಂದ ಬಿಲ್ ಪಾವತಿಗೆ ಸಂಬಂಧಿಸಿದ ಒತ್ತಡ ಎದುರಾಗಿರುವ ಬಗ್ಗೆ ಪರ್ವೇಜ್ ಅವರು
ಸೆಪ್ಟೆಂಬರ್ 12ರಂದು ಕೆಆರ್ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಬಳಿಕ ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಮನೆಯಿಂದ ತೆರಳಿದ್ದ ಅವರು ನಾಪತ್ತೆಯಾಗಿದ್ದರು.
ಹಲವು ದಿನಗಳಾದರೂ ಪರ್ವೇಜ್ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದರು. ಸೆಪ್ಟೆಂಬರ್ 16ರಂದು ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪರ್ವೇಜ್ ಅವರ ಪತ್ತೆಗಾಗಿ ಪೊಲೀಸರು ಐದು ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ಶೋಧ ನಡೆಸುತ್ತಿದ್ದರು.
ನಾಪತ್ತೆಯಾಗುವ ಮುನ್ನ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಅನುದಾನದ ಕೊರತೆ, ಕಾಮಗಾರಿಗಳ ಬಾಕಿ ಪಾವತಿ ಹಾಗೂ ಗುತ್ತಿಗೆದಾರರಿಂದ ಎದುರಾಗಿರುವ ಒತ್ತಡದ ಬಗ್ಗೆ ಉಲ್ಲೇಖಿಸಿದ್ದರು. ತಮ ವೈಯಕ್ತಿಕ ಜೀವನದ ಮೇಲೂ ಈ ಪರಿಸ್ಥಿತಿ ಪರಿಣಾಮ ಬೀರುತ್ತಿದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಮೊದಲು ಪರ್ವೇಜ್ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಇದು ಆತನ ಚಾಳಿಯಾಗಿದೆ. ಕಾಮಗಾರಿಗಳ ಸ್ಥಳ ಪರಿಶೀಲನೆ ಸರಿಯಾಗಿ ಮಾಡುತ್ತಿಲ್ಲ. ವಿಡಿಯೋ ಚಿತ್ರೀಕರಣ ಕೂಡ ಮಾಡಿಸುತ್ತಿಲ್ಲ. ಈ ಬಗ್ಗೆ ಬಿಜೆಪಿ ಶಾಸಕರೇ ತನಿಖೆಗೆ ಒತ್ತಾಯಿಸಿ ದೂರು ನೀಡಿದ್ದರು. ಅಧಿಕಾರಿಗಳು ವಿಚಾರಣೆಗೆ ಕ್ರಮ ಕೈಗೊಂಡಾಗ ನಾಪತ್ತೆಯಾಗಿದ್ದಾನೆ. ಈ ಮೊದಲು ಇದೇ ರೀತಿ ನಾಪತ್ತೆಯಾಗಿದ್ದ. ಅಜೀರ್ ಹಾಗೂ ಇತರೆಡೆ ತಿರುಗಾಡುತ್ತಿದ್ದ ಆತನನ್ನು ಕೊನೆಗೆ ಹೈದರಾಬಾದ್ ನಲ್ಲಿ ಪತ್ತೆ ಹಚ್ಚಿ ಕರೆತರಲಾಗಿತ್ತು. ಈಗಲೂ ಆತನನ್ನು ಹುಡುಕಿ ಕರೆ ತರಲಾಗುವುದು ಎಂದು ಹೇಳಿದರು.
ಪರ್ವೇಜ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರನ್ನು ಪತ್ತೆಹಚ್ಚಲು ಎಲ್ಲ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಪರ್ವೇಜ್ ಅವರ ತಂದೆ ಜಾಫರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಧೈರ್ಯ ತುಂಬಿದ್ದ ಸಚಿವರು, ಯಾವುದೇ ಸಮಸ್ಯೆ ಇದ್ದರೂ ಸರ್ಕಾರ ಪರಿಹರಿಸಲಿದೆ ಎಂದು ಭರವಸೆ ನೀಡಿದ್ದರು.
ಇದೀಗ ಪರ್ವೇಜ್ ಅವರು ಭೋಪಾಲ್ನಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಾಪತ್ತೆಯಾಗಿರುವ ಅಧಿಕಾರಿಯ ಪತ್ತೆಗೆ ಗದಗ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿರುವ ಪರ್ವೇಜ್ ಅಲ್ಲಿಂದ ರೈಲಿನಲ್ಲಿ ಭೂಪಾಲ್ಗೆ ತೆರಳಿರುವ ಸಾಧ್ಯತೆ ಇದೆ. 1200 ಕಿಲೋ ಮಿಟರ್ ಉದ್ದಕ್ಕೂ ಅಧಿಕಾರಿಗಳು ಸಿಸಿಟಿವಿ ಪರಿಶೀಲಿಸಿದ್ದಾರೆ.
ಭೂಪಾಲ್ ನ ರೈಲ್ವೆ ನಿಲ್ದಾಣದಲ್ಲಿ ಹೆಗಲಿಗೆ ಬ್ಯಾಗ್ ತಗುಲಿಹಾಕಿಕೊಂಡು ಪರ್ವೇಜ್ ನಡೆದು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಈ ವಿಡಿಯೋವನ್ನು ಪೊಲೀಸರು ಪರಿಶೀಲಿಸಿದ್ದು, ಆತನ ಮುಂದಿನ ಚಲನವಲನಗಳ ಮೇಲೂ ಕಣ್ಣಿಟ್ಟಿದ್ದಾರೆ. ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕುಟುಂಬಸ್ಥರು ಹಾಗೂ ಅಧಿಕಾರಿಗಳು ನೆಮದಿಯ ನಿಟ್ಟುಸಿರು ಬಿಡುವಂತಾಗಿದೆ.ಪರ್ವೇಜ್ ಈವರೆಗೂ ಮೊಬೈಲ್ ಆನ್ ಮಾಡದೇ ಇರುವುದು ಹಾಗೂ ಎಲ್ಲಿಯೂ ಎಟಿಎಂ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಬಳಸದೆ ಇರುವುದು ಪೊಲೀಸರಿಗೆ ಸವಾಲಾಗಿದೆ.
