ಟೆಲ್ ಅವೀವ್, ಅ. 1- ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ತುರ್ತು ಲ್ಯಾಂಡಿಂಗ್ ಮಾಡಿದ ಬಳಿಕ, ಅದರಲ್ಲಿದ್ದ ಇಸ್ರೇಲಿ ಪ್ರಯಾಣಿಕರನ್ನು ಕರೆತರಲು ಇಸ್ರೇಲ್ ಮುಂದಾಗಿತ್ತು. ಆದರೆ, ಇಸ್ರೇಲಿ ಮಿಲಿಟರಿ ವಿಮಾನಗಳು ಸೌದಿ ಅರೇಬಿಯಾಕ್ಕೆ ಪ್ರವೇಶಿಸಲು ಸೌದಿ ಸರ್ಕಾರ ಅನುಮತಿ ನೀಡಿರಲಿಲ್ಲ ಎನ್ನಲಾಗಿದೆ.
ಇದೀಗ ಪ್ರಯಾಣಿಕರನ್ನು ನಾಗರಿಕ ವಿಮಾನಗಳ ಮೂಲಕ ವಾಪಸ್ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್ ನಡೆಸಿದ ಹಲ್ಲೆ ಮತ್ತು ಹೈಜಾಕ್ ಯತ್ನದ ಹಿನ್ನೆಲೆಯಲ್ಲಿ ದುಬೈ-ಟೆಲ್ ಅವೀವ್ ಫ್ಲೈದುಬೈ ವಿಮಾನ (1073) ಸೌದಿಯ ತಬುಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಆಗಿತ್ತು.
ವಿಮಾನದಲ್ಲಿದ್ದ 174 ಪ್ರಯಾಣಿಕರಲ್ಲಿ ಬಹುತೇಕರು ಇಸ್ರೇಲಿ ಪ್ರಜೆಗಳಾಗಿದ್ದು, ಅವರ ರಕ್ಷಣೆಗಾಗಿ ಇಸ್ರೇಲಿ ವಾಯುಪಡೆಯು ತನ್ನ ಅತ್ಯಾಧುನಿಕ ಸಿ-130ಜೆ ಮಿಲಿಟರಿ ಸಾರಿಗೆ ವಿಮಾನಗಳನ್ನು ಕಳುಹಿಸಲು ಸನ್ನದ್ಧವಾಗಿತ್ತು.
ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವೆ ಯಾವುದೇ ಅಧಿಕೃತ ರಾಜತಾಂತ್ರಿಕ ಸಂಬಂಧಗಳಿಲ್ಲದಿರುವ ಕಾರಣ, ಇಸ್ರೇಲ್‌ನ ಸೇನಾ ವಿಮಾನಗಳು ತನ್ನ ವಾಯುಪ್ರದೇಶ ಅಥವಾ ಮಿಲಿಟರಿ ನೆಲೆಗೆ ಪ್ರವೇಶಿಸಲು ಸೌದಿ ಅನುಮತಿ ನಿರಾಕರಿಸಿತ್ತು.
ಆದಾಗ್ಯೂ, ಎಲ್ಲಾ ಪ್ರಯಾಣಿಕರಿಗೆ ಸ್ಥಳೀಯವಾಗಿ ಆತಿಥ್ಯ ಮತ್ತು ಭದ್ರತೆ ಕಲ್ಪಿಸಲಾಗಿದ್ದು, ಬದಲಿ ನಾಗರಿಕ ವಿಮಾನಗಳ ಮೂಲಕ ಪ್ರಯಾಣಿಕರನ್ನು ಟೆಲ್ ಅವೀವ್‌ಗೆ ತಲುಪಿಸುವ ಪ್ರಕ್ರಿಯೆಯನ್ನು ಫ್ಲೈದುಬೈ ಮತ್ತು ಅಂತಾರಾಷ್ಟ್ರೀಯ ಮಧ್ಯವರ್ತಿಗಳು ನಿರ್ವಹಿಸುತ್ತಿದ್ದಾರೆ.
ಯುಎಇ, ಬಹ್ರೇನ್, ಮೊರಾಕ್ಕೊ ಮುಂತಾದ ರಾಷ್ಟ್ರಗಳು 2020ರಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಅಬ್ರಹಾಂ ಒಪ್ಪಂದಗಳ ಮೂಲಕ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿವೆ. ಸೌದಿ ಅರೇಬಿಯಾವನ್ನೂ ಈ ಒಪ್ಪಂದಕ್ಕೆ ಸೇರಿಸಲು ಅಮೆರಿಕ ಪ್ರಯತ್ನಿಸುತ್ತಿದೆಯಾದರೂ, ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರ ರಚನೆಗೆ ಸ್ಪಷ್ಟ ಭರವಸೆ ಸಿಗದೆ ಇಸ್ರೇಲ್ ಜೊತೆ ಔಪಚಾರಿಕ ಮೈತ್ರಿ ಸಾಧ್ಯವಿಲ್ಲ ಎಂಬುದು ರಿಯಾದ್‌ನ ಖಚಿತ ನಿಲುವಾಗಿದೆ.
ಇಸ್ರೇಲ್ ವಾಯುಪಡೆಯು ಬಿಕ್ಕಟ್ಟಿನ ಸಂದರ್ಭಗಳಲ್ಲಿ ವಿದೇಶಗಳಿಂದ ತನ್ನ ನಾಗರಿಕರನ್ನು ತುರ್ತಾಗಿ ಏರ್‌ಲಿಫ್ಟ್ ಮಾಡಲು ಲಾಕ್‌ಹೀಡ್ ಮಾರ್ಟಿನ್ ಸಿ-130ಜೆ ವಿಮಾನಗಳನ್ನು ಬಳಸುತ್ತದೆ. ಆದರೆ, ರಾಷ್ಟ್ರದ ಅನುಮತಿಯಿಲ್ಲದೆ ಮತ್ತೊಂದು ದೇಶದ ಸೇನಾ ವಿಮಾನಗಳು ಇಳಿಯುವುದು ಅಂತಾರಾಷ್ಟ್ರೀಯ ಶಿಷ್ಟಾಚಾರಕ್ಕೆ ವಿರುದ್ಧವಾದ್ದರಿಂದ ನಾಗರಿಕ ವಿಮಾನಯಾನ ಸಂಸ್ಥೆಗಳ ನೆರವು ಪಡೆಯುವುದು ಅನಿವಾರ್ಯವಾಗಿದೆ.
