ಪ್ರಯಾಗರಾಜ್, ಅ. 1- ಪೊಲೀಸ್ ಠಾಣೆಗಳಲ್ಲಿನ ಸಿಸಿಟಿವಿ ವ್ಯವಸ್ಥೆಗಳು ವರ್ಷವಿಡೀ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರಬೇಕು. ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಕಾರ್ಯನಿರ್ವಹಿಸದಿದ್ದಾಗ ಪೊಲೀಸರು ನಿರ್ದಿಷ್ಟ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಸಿಸಿಟಿವಿ ಕಾರ್ಯನಿರ್ವಹಿಸದಿದ್ದಲ್ಲಿ, ವಿಚಾರಣೆ ಅಥವಾ ಬಂಧನಕ್ಕಾಗಿ ಕರೆತರಲಾದ ಎಲ್ಲ ವ್ಯಕ್ತಿಗಳ ವಿವರಗಳನ್ನು ತಕ್ಷಣವೇ ಜನರಲ್ ಡೈರಿಯಲ್ಲಿ ದಾಖಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ರಾಘವೇಂದ್ರ ದುಬೆ ಮತ್ತು ಮತ್ತೊಬ್ಬರ ಪ್ರಕರಣದ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಅಚಲ್ ಸಚ್ದೇವ್ ಅವರ ಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.ಸೆಪ್ಟೆಂಬರ್ 23ರಂದು ನೀಡಿದ ಆದೇಶದಲ್ಲಿ, ಪೊಲೀಸ್ ಠಾಣೆಗಳಲ್ಲಿನ ಸಿಸಿಟಿವಿ ವ್ಯವಸ್ಥೆಗಳು ವರ್ಷದ 365 ದಿನವೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು.
ಈ ಪ್ರಕರಣದ ಸತ್ಯಾಂಶಗಳು ಮೇಲ್ನೋಟಕ್ಕೆ, ದೂರುದಾರರ ಪರವಾಗಿ ಪೊಲೀಸ್ ಸಿಬ್ಬಂದಿ ರಿಕವರಿ ಏಜೆಂಟ್ಗಳಂತೆ (ಬಾಕಿ ವಸೂಲಿ ಮಾಡುವವರಂತೆ) ವರ್ತಿಸಿದ್ದಾರೆ ಎಂಬುದನ್ನು ಬಲವಾಗಿ ಸೂಚಿಸುತ್ತವೆ ಎಂದು ನ್ಯಾಯಾಲಯ ಗಮನಿಸಿತು.
ಅರ್ಜಿದಾರರ ಪ್ರಕಾರ, ಮರಳು ಗಣಿಗಾರಿಕೆ ಒಪ್ಪಂದದ ವಿವಾದದ ಹಿನ್ನೆಲೆಯಲ್ಲಿ ಅವರನ್ನು ಅಸನ್ಸೋಲ್ನಿಂದ ಅಕ್ರಮವಾಗಿ ವಶಕ್ಕೆ ಪಡೆದು ಚಿತ್ರಕೂಟದ ಸರ್ಧುವಾ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಎಫ್ಐಆರ್ ದಾಖಲಾದ ನಂತರ ಜಾಮೀನು ರಹಿತ ವಾರಂಟ್ಗಳ ಆಧಾರದ ಮೇಲೆ ಅರ್ಜಿದಾರರನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿತು.
ಕೇವಲ ಪೊಲೀಸ್ ಸಿಬ್ಬಂದಿಯೇ ಸಾಕ್ಷಿಗಳಾಗಿದ್ದ ಅತ್ಯಂತ ದೋಷಪೂರಿತ ಬಂಧನ ಮೆಮೊದ ಹಿನ್ನೆಲೆಯಲ್ಲಿ ಬಂಧನವನ್ನು ರದ್ದುಗೊಳಿಸಿದ ಪೀಠ, ಅರ್ಜಿದಾರರನ್ನು ಬಿಡುಗಡೆ ಮಾಡಲು ಆದೇಶಿಸಿತು. ಅಲ್ಲದೆ, 24 ಗಂಟೆಗಳ ಕಾಲ ಅಕ್ರಮವಾಗಿ ಬಂಧನದಲ್ಲಿರಿಸಿದ್ದಕ್ಕಾಗಿ ₹10,000 ಪರಿಹಾರ ನೀಡುವಂತೆ ಸೂಚಿಸಿತು.
ಸಿಸಿಟಿವಿ ವ್ಯವಸ್ಥೆ ವಿಫಲವಾದರೆ, ಸ್ಟೇಷನ್ ಹೌಸ್ ಆಫೀಸರ್ ವ್ಯವಸ್ಥೆ ಕಾರ್ಯನಿರ್ವಹಿಸದ ನಿಖರ ಸಮಯವನ್ನು ಜಿಡಿಯಲ್ಲಿ ದಾಖಲಿಸಬೇಕು. ಈ ಕುರಿತು ಯಾರಿಗೆ ಲಿಖಿತವಾಗಿ ವರದಿ ಮಾಡಲಾಗಿದೆ ಎಂಬುದನ್ನೂ ನಮೂದಿಸಬೇಕು. ಕನಿಷ್ಠ ಅವಧಿಯ ಅಡಚಣೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ದುರಸ್ತಿ ಕ್ರಮಗಳನ್ನು ದಾಖಲಿಸಲು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು.
