Homeಬೆಂಗಳೂರುಸ್ನೇಹಿತರಿಂದಲೇ ಜಿಮ್‌ ತರಬೇತಿದಾರನ ಕೊಲೆ

ಸ್ನೇಹಿತರಿಂದಲೇ ಜಿಮ್‌ ತರಬೇತಿದಾರನ ಕೊಲೆ

ಬೆಂಗಳೂರು,ಅ.5-ಜಿಮ್‌ ತರಬೇತಿದಾರನ ಮೇಲೆ ಸ್ನೇಹಿತರೇ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಅಮೃತಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಕ್ಕೂರು ನಿವಾಸಿ ನಂದನ್‌ (25) ಕೊಲೆಯಾದ ಜಿಮ್‌ ತರಬೇತಿದಾರ. ಸಹಕಾರ ನಗರದಲ್ಲಿ ನಂದನ್‌ ಮ್ಯಾಕ್ಸ್ ಜಿಮ್‌ ತೆರೆದಿದ್ದಾರೆ. ಇಲ್ಲಿ ನಂದನ್‌ ಅವರೇ ತರ ಬೇತಿ ನೀಡುತ್ತಿದ್ದರು. ಈ ಜಿಮ್‌ಗೆ ಒಂದು ವರ್ಷವಾದ ಖುಷಿಯಲ್ಲಿ ಶನಿವಾರ ಮೊದಲ ವರ್ಷದ ವಾರ್ಷಿಕೋತ್ಸವ ನಡೆಸಿದ್ದಾರೆ. ಎಂದಿನಂತೆ ನಿನ್ನೆ ಜಿಮ್‌ಗೆ ಹೋಗಿದ್ದ ನಂದನ್‌ ಅವರು ರಾತ್ರಿ ತಾಯಿಗೆ ಕರೆ ಮಾಡಿ ಸ್ನೇಹಿತರ ಮನೆಗೆ ಹೋಗುತ್ತಿದ್ದೇನೆ, ಒಂದು ವೇಳೆ ತಡವಾದರೆ ಬೆಳಗ್ಗೆ ಬರುತ್ತೇನೆಂದು ಕರೆ ಮಾಡಿ ಹೇಳಿದ್ದಾರೆ.

ಸ್ನೇಹಿತರನ್ನು ಮಾತನಾಡಿಸಲೆಂದು ಇತರೆ ಸಿಬ್ಬಂದಿ ಜೊತೆ ಹೆಬ್ಬಾಳದ ಕೆಂಪಾಪುರದ ಸ್ನೇಹಿತನ ಅಪಾರ್ಟ್‌ಮೆಂಟ್‌ಗೆ ನಂದನ್‌ ಹೋಗಿದ್ದಾಗ ಯಾವುದೋ ವಿಚಾರಕ್ಕೆ ಅವರುಗಳ ನಡುವೆಯೇ ಗಲಾಟೆಯಾಗಿದೆ.ಆ ಸಂದರ್ಭದಲ್ಲಿ ಸ್ನೇಹಿತರು ಸೇರಿಕೊಂಡು ತಳ್ಳಾಟ-ನೂಕಾಟವಾಗಿ ನಂದನ್‌ ಮೇಲೆ ಹಲ್ಲೆ ನಡೆಸಲಾಗಿದೆ. ಕುಸಿದು ಬಿದ್ದ ಆತನನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ.

ಈ ವಿಷಯ ತಿಳಿದು ತಾಯಿ ಮಂಜುಳಾ ಆಸ್ಪತ್ರೆಗೆ ಹೋಗಿದ್ದಾರೆ. ಮಗ ನಂದನ್‌ ಮೃತದೇಹ ಕಂಡು ಗೋಳಾಡಿದ್ದಾರೆ. ಆತನ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ತಮ ಮಗನನ್ನು ಆತನ ಸ್ನೇಹಿತರೇ ಕೊಲೆ ಮಾಡಿದ್ದಾರೆಂದು ಮಂಜುಳಾ ಅವರು ಅಮೃತಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನನ್ವಯ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಾರ್ಟ್‌ಮೆಂಟ್‌ನಲ್ಲಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಯನ್ನಾಧರಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ ಮಿಥುನ್‌ ಕುಮಾರ್‌ ಸುದ್ದಿಗಾರರೊಂದಿಗೆ ಮಾತನಾಡಿ, ನಂದನ್‌ (25)ಎಂಬ ಯುವಕನನ್ನು ಕೊಲೆ ಮಾಡಲಾಗಿದೆ.ಈತ ಜಿಮ್‌ ಟ್ರೈನರ್‌ ಆಗಿ ಕೆಲಸ ಮಾಡುತ್ತಿದ್ದನು. ವಿಶ್ವ, ಶರತ್‌, ಮಿಶಾಂತ್‌ ಮತ್ತು ನಂದನ್‌ ಎಲ್ಲರೂ ಟ್ರೈನರ್‌ಗಳು. ಅನುಷ್‌ ಎಂಬಾತನಿಗೆ ನಂದನ್‌ ಪರ್ಸನಲ್‌ ಟ್ರೈನರ್‌ ಆಗಿರುತ್ತಾನೆ. ಅನುಷ್‌ ಮನೆಗೆ ಪಾರ್ಟಿಗೆ ಅಂತಾ ಹೋದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ವೈಯಕ್ತಿಕ ವಿಚಾರಕ್ಕೆ ಈ ರೀತಿ ಆಗಿದೆ ಅನಿಸುತ್ತಿದೆ. ಸದ್ಯ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ನಿನ್ನೆ ಅವಾರ್ಡ್‌ ಸೆರೆಮನಿ ನಡೆದಿರುತ್ತದೆ. ಕಾರ್ಯಕ್ರಮ ಮುಗಿಸಿ ಅಪಾರ್ಟ್‌ಮೆಂಟ್‌ಗೆ ಹೋಗಿರುತ್ತಾರೆ.ಎಲ್ಲರೂ ಒಂದೇ ವಯೋಮಾನದವರು. ಯಾಕೆ ಗಲಾಟೆ ಆಯ್ತು, ಕೊಲೆ ಯಾಕೆ ಮಾಡಿದರು ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

RELATED ARTICLES
spot_img

Latest News