Homeಬೆಂಗಳೂರು2 ತಿಂಗಳು ಬೆಂಗಳೂರಿನ ರೇಸ್‌‍ಕೋರ್ಸ್‌ ರಸ್ತೆ ಬಂದ್‌

2 ತಿಂಗಳು ಬೆಂಗಳೂರಿನ ರೇಸ್‌‍ಕೋರ್ಸ್‌ ರಸ್ತೆ ಬಂದ್‌

ಬೆಂಗಳೂರು, ಅ.5- ಜಿಬಿಎ ವತಿಯಿಂದ ಮಳೆ ನೀರು ಚರಂಡಿ ಹಾಗೂ ಒಳಚರಂಡಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರೇಸ್‌‍ಕೋರ್ಸ್‌ ರಸ್ತೆ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಇಂದಿನಿಂದ 60 ದಿನಗಳ ಕಾಲ ಕೆಲವು ರಸ್ತೆಗಳಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ರೇಸ್‌‍ಕೋರ್ಸ್‌ ರಸ್ತೆಯ ಟ್ರಿಲೈಟ್‌ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೆ ಹಾಗೂ ಶಿವಾನಂದ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಮೌರ್ಯ ಜಂಕ್ಷನ್‌ನಿಂದ ಹರೇಕೃಷ್ಣ ರಸ್ತೆ ಜಂಕ್ಷನ್‌ವರೆಗೆ ಜಿಬಿಎ ಈಗಾಗಲೇ ವೈಟ್‌ಟಾಪಿಂಗ್‌‍ ಕಾಮಗಾರಿ ನಡೆಸುತ್ತಿದೆ. ಇದರ ಜೊತೆಗೆ ಇದೇ ಮಾರ್ಗದಲ್ಲಿ ಹೊಸದಾಗಿ ಮಳೆ ನೀರು ಚರಂಡಿ ಮತ್ತು ಒಳಚರಂಡಿ ಕಾಮಗಾರಿ ಆರಂಭಿಸಲಾಗುತ್ತಿದೆ. ಕಾಮಗಾರಿ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಸಂಚಾರ ಬದಲಾವಣೆ ಮಾಡಲಾಗಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.

ಸವಾರರಿಗೆ ಪರ್ಯಾಯ ಮಾರ್ಗ:ಸ್ಯಾಂಕಿ ರಸ್ತೆಯಿಂದ ಕೆ.ಆರ್‌.ಮಾರ್ಕೆಟ್‌ ಕಡೆಗೆ:ಬಿಎಂಟಿಸಿ, ಖಾಸಗಿ ಬಸ್‌‍ಗಳು ಹಾಗೂ ಭಾರೀ ಸರಕು ಸಾಗಣೆ ವಾಹನಗಳು ವಿಂಡ್ಲರ್‌ ಮ್ಯಾನರ್‌ ಬ್ರಿಡ್‌್ಜ ಮೂಲಕ ಎಲ್‌ಆರ್‌ಡಿಇ ಜಂಕ್ಷನ್‌ ತಲುಪಿ, ಅಲ್ಲಿಂದ ಬಲ ತಿರುವು ಪಡೆದು ಬಸವೇಶ್ವರ ಜಂಕ್ಷನ್‌ ಮೂಲಕ ಮುಂದುವರಿಯಬೇಕು.

ಸ್ಯಾಂಕಿ ರಸ್ತೆಯಿಂದ ಮೆಜೆಸ್ಟಿಕ್‌ ಕಡೆಗೆ:ಬಿಎಂಟಿಸಿ, ಖಾಸಗಿ ಬಸ್‌‍ಗಳು ಹಾಗೂ ಭಾರೀ ಸರಕು ಸಾಗಣೆ ವಾಹನಗಳು ಕುಮಾರಕೃಪ ರಸ್ತೆ ಮೂಲಕ ಶಿವಾನಂದ ಸರ್ಕಲ್‌ ತಲುಪಿ, ಬಲ ತಿರುವು ಪಡೆದು ಎಸ್‌‍.ಸಿ. ರಸ್ತೆಯಲ್ಲಿ ಎಡಕ್ಕೆ ತಿರುಗಿ ಮುಂದೆ ಸಾಗಬೇಕು.

ಹಳೇ ಜೆಡಿಎಸ್‌‍ ಕಚೇರಿ ಜಂಕ್ಷನ್‌ನಿಂದ ಟ್ರಿಲೈಟ್‌ ಜಂಕ್ಷನ್‌ ಕಡೆಗೆ:
ವಾಹನಗಳು ಹಳೇ ಜೆಡಿಎಸ್‌‍ ಕಚೇರಿ ಜಂಕ್ಷನ್‌ನ ಎಡಭಾಗದ ರಸ್ತೆಯ ಮೂಲಕ ಟ್ರಿಲೈಟ್‌ ಜಂಕ್ಷನ್‌ ಕಡೆಗೆ ತೆರಳಿ, ರೇವ್ಯೂ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕುಮಾರಕೃಪ ರಸ್ತೆ ಮೂಲಕ ಶಿವಾನಂದ ಜಂಕ್ಷನ್‌ ಕಡೆಗೆ ಸಾಗಬೇಕು.

ಟ್ರಿಲೈಟ್‌ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ ಕಡೆಗೆ:ಎಲ್ಲಾ ವಾಹನಗಳು ಶಿವಾನಂದ ಮೇಲ್ಸೇತುವೆ ಮೂಲಕ ತೆರಳಿ, ನೆಹರೂ ಸರ್ಕಲ್‌ನಿಂದ ಎಸ್‌‍.ಸಿ. ರಸ್ತೆಗೆ ತಲುಪಿ ಮೆಜೆಸ್ಟಿಕ್‌ ಕಡೆಗೆ ಸಂಚರಿಸಬೇಕು.ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಸಹಕರಿಸಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

RELATED ARTICLES
spot_img

Latest News