ಬೆಂಗಳೂರು, ಅ.6- ರಾಜ್ಯದಲ್ಲಿ ಮದ್ಯ ಪ್ರಿಯರ ಸಂಖ್ಯೆ ಗಣನೀಯವಾಗಿ ಏರಕೆಯಾಗಿರುವುದರಿಂದ ಮದ್ಯ ಮಾರಾಟ ಪ್ರಮಾಣವೂ ಹೆಚ್ಚಾಗಿದ್ದು, ಅಬಕಾರಿ ಇಲಾಖೆಯ ಆದಾಯದಲ್ಲೂ ಭಾರೀ ಹೆಚ್ಚಳವಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಆರು ತಿಂಗಳ ಅವಧಿಯಲ್ಲಿ ಅಬಕಾರಿ ಇಲಾಖೆಯ ವಹಿವಾಟು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 2,621 ಕೋಟಿ ಹೆಚ್ಚಾಗಿದೆ.
ಕಳೆದ ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಅಬಕಾರಿ ಇಲಾಖೆಯ ಒಟ್ಟು ವಹಿವಾಟು 19,570 ಕೋಟಿ ಆಗಿದ್ದರೆ, ಈ ಬಾರಿ ಇದೇ ಅವಧಿಯಲ್ಲಿ 22,191 ಕೋಟಿಗೆ ಏರಿಕೆಯಾಗಿದೆ. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ 2,621 ಕೋಟಿ ಹೆಚ್ಚಳವಾಗಿದ್ದು, ಆದಾಯದಲ್ಲಿ 13.39ರಷ್ಟು ಏರಿಕೆ ದಾಖಲಾಗಿದೆ.
ಐಎಂಎಲ್ ಮಾರಾಟದಲ್ಲೂ ಹೆಚ್ಚಳ:ರಾಜ್ಯದಲ್ಲಿ ಭಾರತೀಯ ನಿರ್ಮಿತ ಮದ್ಯ (ಐಎಂಎಲ್) ಮಾರಾಟದಲ್ಲೂ ಗಣನೀಯ ಏರಿಕೆಯಾಗಿದೆ. ಕಳೆದ ವರ್ಷದ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ 15,376 ಕೋಟಿ ಮೌಲ್ಯದ ಐಎಂಎಲ್ ವಹಿವಾಟು ನಡೆದಿತ್ತು. ಪ್ರಸಕ್ತ ವರ್ಷದ ಇದೇ ಅವಧಿಯಲ್ಲಿ ಇದು 17,424 ಕೋಟಿಗೆ ಏರಿಕೆಯಾಗಿದೆ.ಇದರಿಂದ ಐಎಂಎಲ್ ಮಾರಾಟದಲ್ಲಿ ಬರೋಬ್ಬರಿ 2,048 ಕೋಟಿ ಹೆಚ್ಚಳವಾಗಿದೆ. ಒಟ್ಟಾರೆ ಅಬಕಾರಿ ಆದಾಯ ಹೆಚ್ಚಳದಲ್ಲಿ ಐಎಂಎಲ್ ಮಾರಾಟದ ಏರಿಕೆಯೂ ಪ್ರಮುಖ ಪಾಲು ಹೊಂದಿದೆ.
ಬಿಯರ್ಗೂ ಬೇಡಿಕೆ ಹೆಚ್ಚಳ:ಇನ್ನು ರಾಜ್ಯದಲ್ಲಿ ಬಿಯರ್ ಮಾರಾಟದಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದೆ. ಕಳೆದ ವರ್ಷದ ಏಪ್ರಿಲ್ಸೆಪ್ಟೆಂಬರ್ ಅವಧಿಯಲ್ಲಿ 2,836 ಕೋಟಿ ಮೌಲ್ಯದ ಬಿಯರ್ ಮಾರಾಟವಾಗಿತ್ತು. ಈ ಬಾರಿ ಇದೇ ಅವಧಿಯಲ್ಲಿ ಬಿಯರ್ ವಹಿವಾಟು 3,377 ಕೋಟಿಗೆ ಏರಿಕೆಯಾಗಿದೆ.ಅಂದರೆ, ಬಿಯರ್ ಮಾರಾಟದಲ್ಲಿ 541 ಕೋಟಿ ಹೆಚ್ಚಳ ದಾಖಲಾಗಿದೆ. ಐಎಂಎಲ್ ಜತೆಗೆ ಬಿಯರ್ ಮಾರಾಟವೂ ಏರಿಕೆಯಾಗಿರುವುದು ಅಬಕಾರಿ ಇಲಾಖೆಯ ಒಟ್ಟು ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ.
