ಬೆಂಗಳೂರು,ಅ.6- ನಕಲಿ ಔಷಧಿ ದಂಧೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ಆರೋಪಿಗಳಿಂದ ಹೆಚ್ಚಿನ ಪ್ರಮಾಣದ ನಕಲಿ ಔಷಧಿಗಳನ್ನು ಖರೀದಿಸಿ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಗರದ ಮೂರು ಫಾರ್ಮಾಗಳ ಮೇಲೆ ದಾಳಿ ನಡೆಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಗಳಾದ ಪ್ರಶಾಂತ್ ಹಾಗೂ ಡಿಸ್ಟ್ರಿಬ್ಯೂಟರ್ ವಿರೇಶ್ ಅವರ ವಿಚಾರಣೆ ವೇಳೆ ಹಲವು ಮಹತ್ವದ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಇವರಿಂದ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಔಷಧಿಗಳನ್ನು ಪಡೆದು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ರಾಜರಾಜೇಶ್ವರಿ ನಗರದ ಆರ್ಆರ್ ಫಾರ್ಮಾ, ಚಾಮರಾಜಪೇಟೆಯ ಮೆಡಿ365 ಎಲ್ಎಲ್ಪಿ ಫಾರ್ಮಾ ಹಾಗೂ ತಲಘಟ್ಟಪುರದ ಪಾಟೇಲ್ ಫಾರ್ಮಾ ಮೇಲೆ ಎಸ್ಐಟಿ ದಾಳಿ ನಡೆಸಿದೆ.
ದಾಳಿಯ ವೇಳೆ ನಕಲಿ ಔಷಧಿಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಮೂರು ಫಾರ್ಮಾಗಳ ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಕಳೆದ ವರ್ಷ ಏಪ್ರಿಲ್ನಿಂದ ಇಲ್ಲಿಯವರೆಗೆ ಆರೋಪಿಗಳಿಂದ ಯಾವ ಪ್ರಮಾಣದಲ್ಲಿ ನಕಲಿ ಮಾತ್ರೆಗಳನ್ನು ಖರೀದಿಸಿ ಮಾರಾಟ ಮಾಡಲಾಗಿದೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ.
ಅಲ್ಲದೆ, ನಕಲಿ ಔಷಧಿಗಳನ್ನು ಯಾವೆಲ್ಲ ಆಸ್ಪತ್ರೆಗಳಿಗೆ ಫಾರ್ಮಾಗಳ ಮೂಲಕ ಸರಬರಾಜು ಮಾಡಲಾಗಿದೆ, ಯಾವ ಅವಧಿಯಿಂದ ಈ ವ್ಯವಹಾರ ನಡೆಯುತ್ತಿದೆ ಹಾಗೂ ದಂಧೆಯಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆಯೂ ಎಸ್ಐಟಿ ಅಧಿಕಾರಿಗಳು ಫಾರ್ಮಾ ಮಾಲೀಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
