Homeರಾಷ್ಟ್ರೀಯಉತ್ತರ ಪ್ರದೇಶ : ಗುರುಕುಲದಲ್ಲಿ ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸುವಾಗ ನಾಲ್ವರು ವಿದ್ಯಾರ್ಥಿಗಳ ಸಾವು

ಉತ್ತರ ಪ್ರದೇಶ : ಗುರುಕುಲದಲ್ಲಿ ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸುವಾಗ ನಾಲ್ವರು ವಿದ್ಯಾರ್ಥಿಗಳ ಸಾವು

ಉತ್ತರ ಪ್ರದೇಶ, ಅ. 7- ಉತ್ತರ ಪ್ರದೇಶದ ವೃಂದಾವನದಲ್ಲಿರುವ ಗುರುಕುಲವೊಂದರಲ್ಲಿ ಭೂಗತ ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಅನಿಲ ಸೇವಿಸಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚೈತನ್ಯ ವಿಹಾರದಲ್ಲಿರುವ ಸಂಸ್ಕೃತ ಶಾಲೆ ಹಾಗೂ ಗುರುಕುಲದಲ್ಲಿ ಈ ದುರ್ಘಟನೆ ನಡೆದಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಚಂದ್ರ ಪ್ರಕಾಶ್‌ ಸಿಂಗ್‌ ನೀಡಿರುವ ಮಾಹಿತಿಯಂತೆ, ತಡರಾತ್ರಿ ಟ್ಯಾಂಕ್‌ನಿಂದ ದುರ್ವಾಸನೆ ಬರುತ್ತಿರುವುದನ್ನು ವಿದ್ಯಾರ್ಥಿಗಳು ಗಮನಿಸಿದ್ದರು. ಸುಮಾರು 12ರಿಂದ 14 ಅಡಿ ಆಳದಲ್ಲಿದ್ದ ಟ್ಯಾಂಕ್‌ ಅನ್ನು ಸ್ವಚ್ಛಗೊಳಿಸಲು ಅವರು ಮುಂದಾಗಿದ್ದರು.

ಮೊದಲು ಮೋಟಾರ್‌ ಬಳಸಿ ಟ್ಯಾಂಕ್‌ನಲ್ಲಿದ್ದ ನೀರನ್ನು ಹೊರಹಾಕಲಾಯಿತು. ಬಳಿಕ ಉಳಿದಿದ್ದ ನೀರನ್ನು ಸ್ವಚ್ಛಗೊಳಿಸಲು ಓರ್ವ ವಿದ್ಯಾರ್ಥಿ ಟ್ಯಾಂಕ್‌ಗೆ ಇಳಿದಿದ್ದಾನೆ. ಆದರೆ ಒಳಗೆ ಇಳಿದ ಕೆಲವೇ ಕ್ಷಣಗಳಲ್ಲಿ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಮತ್ತಷ್ಟು ವಿದ್ಯಾರ್ಥಿಗಳೂ ಟ್ಯಾಂಕ್‌ಗೆ ಇಳಿದಿದ್ದು, ಒಟ್ಟು ಐವರು ವಿಷಕಾರಿ ಅನಿಲದ ಪರಿಣಾಮಕ್ಕೆ ಒಳಗಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ.

ತಕ್ಷಣವೇ ಎಲ್ಲರನ್ನೂ ಟ್ಯಾಂಕ್‌ನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ರುದ್ರ ಎಂಬ ವಿದ್ಯಾರ್ಥಿ ಮಾತ್ರ ಬದುಕುಳಿದಿದ್ದಾನೆ. ಆತ ಪ್ರಜ್ಞಾವಸ್ಥೆಯಲ್ಲಿದ್ದು, ಮಾತನಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ವಿದ್ಯಾರ್ಥಿಗಳ ವಯಸ್ಸು 17ರಿಂದ 20 ವರ್ಷಗಳ ನಡುವೆ ಎಂದು ಎಸ್‌ಎಸ್‌ಪಿ ಶ್ಲೋಕ್‌ ಕುಮಾರ್‌ ತಿಳಿಸಿದ್ದಾರೆ. ಗುರುಕುಲದಲ್ಲಿ ಸುಮಾರು 200 ವಿದ್ಯಾರ್ಥಿಗಳು ದಾಖಲಾಗಿದ್ದು, ಅವರಲ್ಲಿ ಸುಮಾರು 100 ಮಂದಿ ಕ್ಯಾಂಪಸ್‌ನ ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾಜಿಸ್ಟ್ರೇಟ್‌ ತನಿಖೆಗೆ ಆದೇಶ:

ಘಟನೆಯ ಕುರಿತು ಮ್ಯಾಜಿಸ್ಟ್ರೇಟ್‌ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಗುರುಕುಲಕ್ಕೆ ಅಗತ್ಯ ಮಾನ್ಯತೆಗಳಿದ್ದವೆಯೇ, ವಿದ್ಯಾರ್ಥಿಗಳಿಗೆ ಟ್ಯಾಂಕ್‌ ಸ್ವಚ್ಛಗೊಳಿಸುವ ಜವಾಬ್ದಾರಿ ಏಕೆ ನೀಡಲಾಯಿತು ಹಾಗೂ ಸುರಕ್ಷತಾ ಕ್ರಮಗಳನ್ನು ಏಕೆ ಕೈಗೊಳ್ಳಲಾಗಿರಲಿಲ್ಲ ಎಂಬ ಅಂಶಗಳನ್ನೂ ತನಿಖೆ ಮಾಡಲಾಗುತ್ತದೆ.

ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುವುದು. ಕುಟುಂಬಸ್ಥರು ನೀಡುವ ದೂರುಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ವೃಂದಾವನ ಪ್ರದೇಶದಲ್ಲಿರುವ ಇತರ ಗುರುಕುಲಗಳ ಸುರಕ್ಷತಾ ಪರಿಶೀಲನೆ ಹಾಗೂ ಕಟ್ಟಡಗಳ ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಮುಖ್ಯಮಂತ್ರಿ ಘಟನೆ ಕುರಿತು ಮಾಹಿತಿ ಪಡೆದು, ರಕ್ಷಣಾ ಕಾರ್ಯಾಚರಣೆ, ಪರಿಹಾರ ಹಾಗೂ ಬದುಕುಳಿದ ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

RELATED ARTICLES
spot_img

Latest News