ಬೆಂಗಳೂರು, ಅ.7- ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಇತರ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ದೈಹಿಕವಾಗಿ ಹಲ್ಲೆ ನಡೆಸಿರುವ ಘಟನೆ ಅತ್ಯಂತ ಕಳವಳಕಾರಿಯಾಗಿದ್ದು, ಈ ಬಗ್ಗೆ ತಕ್ಷಣವೇ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಕಾನೂನು ಜಾರಿ ಅಧಿಕಾರಿಗಳು ಯಾವುದೇ ರೀತಿಯ ಬಲಪ್ರಯೋಗ ನಡೆಸುವುದಾದರೆ ಅದು ಕಾನೂನುಬದ್ಧವಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಹಾಗೂ ಮಿತಿಯೊಳಗಿರಬೇಕು. ಘಟನೆಗೆ ಸಂಬಂಧಿಸಿದ ದೃಶ್ಯಗಳನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಬೇಕು. ಕಾನೂನುಬಾಹಿರವಾಗಿ ಅಥವಾ ಅತಿಯಾದ ಬಲ ಪ್ರಯೋಗ ನಡೆಸಿರುವುದು ತನಿಖೆಯಲ್ಲಿ ಸಾಬೀತಾದರೆ, ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶಾಂತಿಯುತವಾಗಿ ಪ್ರಜಾಸತ್ತಾತಕ ರೀತಿಯಲ್ಲಿ ನಡೆಯುವ ಪ್ರತಿಭಟನೆ ಹಾಗೂ ಭಿನ್ನಮತವನ್ನು ದೈಹಿಕ ಬಲಪ್ರಯೋಗ ಅಥವಾ ಬೆದರಿಕೆಯ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ನಾಯಕರೊಂದಿಗೆ ನಡೆದಿರುವ ವರ್ತನೆ ಅತ್ಯಂತ ಆತಂಕಕಾರಿ ಹಾಗೂ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
