ಲಂಡನ್, ಅ. 7- ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಐದನೇ ಆಧ್ಯಾತ್ಮಿಕ ಗುರು ದಿವಂಗತ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಜೀವನ ಮತ್ತು ಸೇವೆಯನ್ನು ಆಧರಿಸಿದ 13 ಸಂಪುಟಗಳ ಬೃಹತ್ ಜೀವನಚರಿತ್ರೆ ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾಗಿದೆ. ಏಕೈಕ ಲೇಖಕರಿಂದ ರಚಿಸಲ್ಪಟ್ಟ ವಿಶ್ವದ ಅತಿ ಸುದೀರ್ಘ ಜೀವನಚರಿತ್ರೆ ಎಂಬ ಹೆಗ್ಗಳಿಕೆಗೆ ಈ ಕೃತಿ ಪಾತ್ರವಾಗಿದೆ.
ಲಂಡನ್‌ನ ಒವಿಒ ಅರೆನಾ ವೆಂಬ್ಲಿಯಲ್ಲಿ ನಡೆದ ಬಿಎಪಿಎಸ್‌ನ ಪ್ರಸ್ತುತ ಆಧ್ಯಾತ್ಮಿಕ ಮುಖ್ಯಸ್ಥ ಮಹಂತ್ ಸ್ವಾಮಿ ಮಹಾರಾಜ್ ಅವರ 94ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಯ ಹಿರಿಯ ಅಧಿಕಾರಿ ಕಾರ್ಲ್ ಸ್ಯಾವಿಲ್ ಅವರು ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸುಮಾರು 11,000 ಮಂದಿ ಭಾಗವಹಿಸಿದ್ದು, ವಿಶ್ವದಾದ್ಯಂತ ಸಾವಿರಾರು ಜನರು ನೇರ ವೆಬ್‌ಕಾಸ್ಟ್ ಮೂಲಕ ವೀಕ್ಷಿಸಿದರು.
‘ಎ ಡಿಟೇಲ್ಡ್ ಲೈಫ್ ಆ್ಯಂಡ್ ವರ್ಕ್’ ಕೃತಿಯನ್ನು ಸಂಸ್ಕೃತ ವಿದ್ವಾಂಸ ಸಾಧು ಆದರ್ಶಜೀವನದಾಸ ಸ್ವಾಮಿ ಬರೆದಿದ್ದಾರೆ. 2017ರ ಜುಲೈನಿಂದ 2020ರ ಆಗಸ್ಟ್‌ವರೆಗೆ 38 ತಿಂಗಳ ಕಾಲ ಸಂಶೋಧನೆ ನಡೆಸಿ ಕೃತಿಯನ್ನು ಸಿದ್ಧಪಡಿಸಲಾಗಿದೆ. ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಆಧ್ಯಾತ್ಮಿಕ ನಾಯಕತ್ವ, ಸರಳತೆ, ಭಕ್ತಿ ಮತ್ತು ನಿಸ್ವಾರ್ಥ ಸೇವೆಯನ್ನು ಕೃತಿ ದಾಖಲಿಸಿದೆ.
ಈ ಪುಸ್ತಕದ 3.10 ಲಕ್ಷಕ್ಕೂ ಹೆಚ್ಚು ಪ್ರತಿಗಳು ಈಗಾಗಲೇ ಮಾರಾಟವಾಗಿವೆ ಎಂದು ತಿಳಿಸಲಾಗಿದೆ. 2026ರಲ್ಲಿ ಬಿಎಪಿಎಸ್ ಸಂಸ್ಥೆಗೆ ದೊರೆತ ಎರಡನೇ ಗಿನ್ನೆಸ್ ದಾಖಲೆ ಇದಾಗಿದೆ. ಫೆಬ್ರವರಿಯಲ್ಲಿ ವಡೋದರಾದಲ್ಲಿ ಸಾವಿರಾರು ಮಕ್ಕಳು ಏಕಕಾಲದಲ್ಲಿ ಸಂಸ್ಕೃತ ಶ್ಲೋಕಗಳನ್ನು ಪಠಿಸುವ ಮೂಲಕ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದರು.
