ಮಾಸ್ಕೋ, ಅ. 7- ರಷ್ಯಾದಲ್ಲಿ ಸಂಶೋಧಕಿಯೊಬ್ಬರ ಸಾವಿಗೆ ಪ್ಲೇಗ್ ಕಾರಣವಲ್ಲ. ಹೀಗಾಗಿ ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸ್ಪಷ್ಟಪಡಿಸಿದೆ. ಅ. 2ರಂದು ತೀವ್ರ ನ್ಯುಮೋನಿಯಾದಿಂದ ಸಂಶೋಧಕಿ ಮೃತಪಟ್ಟಿದ್ದರು. ಪ್ರಯೋಗಾಲಯದಲ್ಲಿ ಆಕಸ್ಮಿಕವಾಗಿ ಸೋಂಕು ತಗುಲಿದ್ದು, ಇದು ನ್ಯುಮೋನಿಕ್ ಪ್ಲೇಗ್ ಆಗಿರಬಹುದು ಎಂಬ ಆರಂಭಿಕ ವರದಿ ಬಂದಿತ್ತು. ಇದರಿಂದ ವಿಶ್ವದಾದ್ಯಂತ ಆತಂಕ ಮೂಡಿತ್ತು.
ರಷ್ಯಾದ ಆರೋಗ್ಯ ಅಧಿಕಾರಿಗಳಿಂದ ವಿಶ್ವ ಆರೋಗ್ಯ ಸಂಸ್ಥೆಗೆ ಯಾವುದೇ ಪ್ಲೇಗ್ ಪ್ರಕರಣ ವರದಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದ ಕುರಿತು ಸಂಸ್ಥೆ ಸಕ್ರಿಯವಾಗಿ ಮಾಹಿತಿ ಸಂಗ್ರಹಿಸುತ್ತಿದೆ.
ಇರ್ಕುಟ್ಸ್ಕ್‌ನಲ್ಲಿ ಈ ಬಗ್ಗೆ ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖೆ ನಡೆಸಲಾಗಿದ್ದು, ಮೃತ ಸಂಶೋಧಕಿಯ ಸಂಪರ್ಕದಲ್ಲಿದ್ದವರನ್ನು ಗುರುತಿಸಲಾಗಿದೆ. ಅವರಿಗೆ ವೈದ್ಯಕೀಯ ಮೇಲ್ವಿಚಾರಣೆ ಮತ್ತು ಪರೀಕ್ಷೆ ನಡೆಸಲಾಗಿದೆ. ಸಂಪರ್ಕಿತರಲ್ಲಿ ಹೆಚ್ಚಿನ ಅಪಾಯದ ಯಾವುದೇ ರೋಗಕಾರಕ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಇದೀಗ ಎಲ್ಲ ಸಂಪರ್ಕಿತರ ವೈದ್ಯಕೀಯ ಮೇಲ್ವಿಚಾರಣೆಯೂ ಪೂರ್ಣಗೊಂಡಿದೆ.ರಷ್ಯಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇದೇ ವೇಳೆ, ಸಂಶೋಧಕಿಗೆ ತೀವ್ರ ನ್ಯುಮೋನಿಯಾ ಉಂಟಾಗಲು ನಿಖರ ಕಾರಣವೇನು ಎಂಬುದನ್ನು ತಿಳಿಯಲು ಹೆಚ್ಚಿನ ಮಾಹಿತಿಯನ್ನು ಕೇಳಿದೆ. ಸಾರ್ವಜನಿಕ ಆರೋಗ್ಯ ಕ್ರಮಗಳಿಗೆ ಕಾರಣವಾದ ರೋಗಕಾರಕ ಯಾವುದು ಎಂಬುದರ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ರಷ್ಯಾ ಅಧಿಕಾರಿಗಳನ್ನು ಕೋರಿದೆ. ಇನ್ನೊಬ್ಬ ಉದ್ಯೋಗಿಗೂ ನ್ಯುಮೋನಿಯಾ ಕಾಣಿಸಿಕೊಂಡಿದೆ ಎಂಬ ವರದಿಯಿದ್ದು, ಈ ಬಗ್ಗೆಯೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.
