ಬೆಂಗಳೂರು, ಅ.7- ಜಿಎಸ್‌ಟಿ ತೆರಿಗೆಯಲ್ಲಿ ರಾಜ್ಯಕ್ಕೆ ದೊರೆಯಬೇಕಾದ ನ್ಯಾಯೋಚಿತ ಪಾಲು ಪಡೆಯಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರ ಪ್ರಯತ್ನ ನಡೆಸಿದ್ದು, ದಕ್ಷಿಣ ಭಾರತದ ರಾಜ್ಯಗಳ ಪರವಾಗಿ ಧ್ವನಿ ಎತ್ತುವ ತಯಾರಿ ನಡೆಸಿದ್ದಾರೆ.ಬೆಂಗಳೂರಿನಲ್ಲಿ ಸತತವಾಗಿ 3 ದಿನಗಳ ಕಾಲ ಅಧಿಕಾರಿಗಳ ಜೊತೆ ನಿರಂತರವಾಗಿ ಜಿಎಸ್‌ಟಿ ಕುರಿತಂತೆ ಸಮಾಲೋಚನೆ ನಡೆಸಿದ್ದರು. ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಸಹೊದ್ಯೋಗಿಗಳಿಂದ ಸಲಹೆ ಪಡೆದುಕೊಂಡಿದ್ದಾರೆ.
ನಿನ್ನೆಯಿಂದ ದೆಹಲಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿಯವರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮುಂದುವರೆಸಿದ್ದಾರೆ. ದೇಶದಲ್ಲೇ ಕರ್ನಾಟಕ ಅತೀ ಹೆಚ್ಚು ಜಿಎಸ್‌ಟಿ ತೆರಿಗೆ ಪಾವತಿ ಮಾಡುತ್ತಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಅದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅತ್ಯಂತ ಕಡಿಮೆ ಪಾಲು ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ನ್ಯಾಯೋಚಿತವಾದ ಹಕ್ಕು ಪಡೆಯಲು ಪ್ರಯತ್ನ ಮುಂದುವರೆಸಿದೆ.
ರಾಜ್ಯದಿಂದ ಸಂಗ್ರಹವಾಗುವ ತೆರಿಗೆಯಲ್ಲಿ ಉತ್ತರ ಪ್ರದೇಶ, ಗುಜರಾತ್, ಬಿಹಾರ, ಮಧ್ಯಪ್ರದೇಶದಂತಹ ರಾಜ್ಯಗಳಿಗೆ ಹೆಚ್ಚಿನ ಪಾಲು ಸಿಗುತ್ತಿದೆ. ಕರ್ನಾಟಕ ಜಿಎಸ್‌ಟಿ ಸಂಗ್ರಹ ಅಷ್ಟೇ ಅಲ್ಲ, ಆದಾಯ ತೆರಿಗೆ, ಟೋಲ್ ಶುಲ್ಕ ಹಾಗೂ ಇತರ ಸೆಸ್‌ಗಳ ಸಂಗ್ರಹದಲ್ಲೂ ಕೇಂದ್ರಕ್ಕೆ ಹೆಚ್ಚಿನ ಹಣ ರವಾನೆಯಾಗುತ್ತಿದೆ. ಕೇಂದ್ರದಿಂದ ತೆರಿಗೆ ಮರು ಹಂಚಿಕೆಯ ವೇಳೆ ಕರ್ನಾಟಕ ತಾತ್ಸಾರಕ್ಕೊಳಗಾಗುತ್ತಿದೆ ಎಂಬ ಆರೋಪಗಳಿವೆ.
ಜೊತೆಗೆ ಕೇಂದ್ರದ ಸಹಭಾಗಿತ್ವದಲ್ಲಿರುವ ವಿವಿಧ ಯೋಜನೆಗಳಿಂದಲೂ ರಾಜ್ಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂಬ ಆರೋಪಗಳಿವೆ. ಈ ಎಲ್ಲಾ ಅಂಶಗಳನ್ನು ನಾಳೆ ನಡೆಯುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಿ, ಕೇಂದ್ರ ಹಣಕಾಸು ಸಚಿವರ ಗಮನ ಸೆಳೆಯಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಯಾರಿ ಮಾಡಿಕೊಂಡಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕರ್ನಾಟಕ ಅಷ್ಟೇ ಅಲ್ಲ, ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆಯೂ ಡಿ.ಕೆ.ಶಿವಕುಮಾರ್ ಧ್ವನಿ ಎತ್ತಲಿದ್ದಾರೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ರಾಜ್ಯಗಳ ನಡುವೆ ಯಾವ ರೀತಿಯ ತಾರತಮ್ಯವಾಗುತ್ತಿದೆ ಎಂಬುದನ್ನು ಡಿ.ಕೆ.ಶಿವಕುಮಾರ್ ನಾಳಿನ ಸಭೆಯಲ್ಲಿ ವಿವರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕಾಗಿ ದಕ್ಷಿಣ ಭಾರತ ವಿವಿಧ ರಾಜ್ಯಗಳಿಂದಲೂ ಮಾಹಿತಿ ಕಲೆ ಹಾಕಿದ್ದಾರೆ ಮತ್ತು ಅಲ್ಲಿನ ಹಣಕಾಸು ಸಚಿವರ ಜೊತೆ ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
