ನವದೆಹಲಿ, ಅ. 7 (ಪಿಟಿಐ)- ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ವಿರೋಧ ಪಕ್ಷಗಳು ನಡೆಸಿದ ಮೆರವಣಿಗೆ ವೇಳೆ ಆಕಾಶವಾಣಿ ಭವನದ ಆವರಣಕ್ಕೆ ಅನುಮತಿಯಿಲ್ಲದೆ ಪ್ರವೇಶಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಇತರರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅವರ ಬೆಂಬಲಿಗರು ಹಾಗೂ ಅವರೊಂದಿಗೆ ಇದ್ದ ಇತರ ಸಂಸದರು ಅನುಮತಿಯಿಲ್ಲದೆ ಆಕಾಶವಾಣಿ ಭವನದ ಆವರಣಕ್ಕೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ದೂರು ಬಂದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಕಚೇರಿಯತ್ತ ಸಾಗುತ್ತಿದ್ದ ಇಂಡಿಯಾ ಮೈತ್ರಿಕೂಟದ ಮೆರವಣಿಗೆಯನ್ನು ಪೊಲೀಸರು ತಡೆದ ಬಳಿಕ, ಆಕಾಶವಾಣಿ ಭವನದೊಳಗೆ ಎಂಟು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದ ಸುಮಾರು 260 ಮಂದಿಯಲ್ಲಿ ಈ ಇಬ್ಬರು ಕಾಂಗ್ರೆಸ್ ನಾಯಕರೂ ಸೇರಿದ್ದರು. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳಿವೆ ಎಂದು ಆರೋಪಿಸಿ ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ‘ಮತ ಕಳ್ಳತನ’ದ ವಿಷಯವನ್ನೂ ಪ್ರಸ್ತಾಪಿಸಿದ್ದರು.
ದೆಹಲಿ ಪೊಲೀಸರ ಪ್ರಕಾರ, ಇಂಡಿಯಾ ಮೈತ್ರಿಕೂಟದ ಪಕ್ಷಗಳು ಅ. 6ರಂದು ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿವರೆಗೆ ಮೆರವಣಿಗೆ ನಡೆಸಲು ಯೋಜಿಸಿದ್ದವು. ಆದರೆ, ಮೆರವಣಿಗೆಗೆ ಅನುಮತಿ ಕೋರಿ ನವದೆಹಲಿಯ ಪೊಲೀಸ್ ಉಪ ಆಯುಕ್ತರ ಕಚೇರಿಗೆ ಯಾವುದೇ ಅರ್ಜಿ ಸಲ್ಲಿಸಿರಲಿಲ್ಲ ಮತ್ತು ಯಾವುದೇ ಅನುಮತಿಯನ್ನೂ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
