ಬೆಂಗಳೂರು,ಅ.7- ಸ್ಟಿಂಗ್ ಆಪರೇಷನ್ ನಡೆಯುತ್ತಿದ್ದು, ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಪುಟ ಸಭೆಯಲ್ಲಿ ನೀಡಿದ್ದಾರೆಂಬ ಮಾಹಿತಿ ಇದೆ. ಆದರೆ ಮುಖ್ಯಮಂತ್ರಿಯಾಗಲು ಸ್ಟಿಂಗ್ ಆಪರೇಷನ್ ಮಾಡಿದ್ದಾರೆಂಬ ಆರೋಪವನ್ನು ಕಾಂಗ್ರೆಸ್‌ನವರೇ ಮಾಡುತ್ತಿದ್ದಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಮುಖ್ಯಮಂತ್ರಿ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲು ಸ್ಟಿಂಗ್ ಆಪರೇಷನ್ ಮಾಡಿ ಅದನ್ನು ಹೈಕಮಾಂಡ್ ಗಮನಕ್ಕೆ ತಂದು ಯಶಸ್ವಿಯಾಗಿದ್ದಾರೆಂದು ಕಾಂಗ್ರೆಸ್‌ನವರೇ ಹೇಳುತ್ತಾರೆ ಎಂದರು.
ಸಚಿವರು ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬ ಬಗ್ಗೆ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಇದರ ಬಗ್ಗೆ ನನಗೆ ಮಾಹಿತಿ ಇದೆ. ಎಲ್ಲರೂ ಎಚ್ಚರಿಕೆಯಿಂದಿರಿ ಎಂದು ಸಿಎಂ ಸೂಚನೆ ನೀಡಿದ್ದಾರೆಂಬ ಮಾಹಿತಿ ಇದೆ ಎಂದು ಅವರು ತಿಳಿಸಿದರು. ಸಚಿವರನ್ನು ಕಪಿಮುಷ್ಟಿಯಲ್ಲಿ ಇಟ್ಟಕೊಳ್ಳಲು ಈ ರೀತಿ ಮಾಡುತ್ತಿರಬಹುದೇನೋ? ನನಗೆ ಗೊತ್ತಿಲ್ಲ. ಒಂದು ವೇಳೆ ಕುಮಾರಸ್ವಾಮಿ ಸ್ಟಿಂಗ್ ಆಪರೇಷನ್ ಮಾಡುತ್ತಿರುವ ದಾಖಲೆಗಳಿದ್ದರೆ ಕ್ರಮ ಕೈಗೊಳ್ಳಲಿ ಎಂದರು.
ನಾನು ಸ್ಟಿಂಗ್ ಆಪರೇಷನ್ ಮಾಡುತ್ತಿರುವುದು ಕಾನೂನು ಬಾಹಿರವಾಗಿ ನಡೆಯುತ್ತಿರುವ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕಲು. ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರ ಕತೆ ಏನಾಯಿತು? ಎಂಬುದು ನಿಮಗೆ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು. ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಬಾಧಿತರಾದ ರೈತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರಿಗೆ ಬೆಂಬಲ ನೀಡುತ್ತೇವೆ. ಅಗತ್ಯ ಮಾಹಿತಿಯನ್ನು ಕೊಡುತ್ತೇವೆ. ನಾವು ಸುಪ್ರೀಂಕೋರ್ಟ್‌ಗೆ ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
