ಬೆಂಗಳೂರು,ಅ.7-ಕಳೆದ ಒಂದೂವರೆ ವರ್ಷದಲ್ಲಿ ಎರಡು ನಕಲಿ ಆ್ಯಂಟಿಬಯೋಟಿಕ್ಗಳನ್ನು ಸುಮಾರು 15 ಸಾವಿರ ಔಷಧಿ ಶೀಷೆಗಳಲ್ಲಿ ತುಂಬಿ ವಿತರಿಸಲಾಗಿದೆ ಎಂಬುವುದು ಎಸ್ಐಟಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ರಾಜ್ಯದಲ್ಲಿ ನಕಲಿ ಔಷಧ ದಂಧೆ ಕುರಿತು ಎಸ್ಐಟಿ ಹಲವು ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಆರೋಪಿಗಳು 2025ರ ಏಪ್ರಿಲ್ನಿಂದ ಈ ಜಾಲದಲ್ಲಿ ತೊಡಗಿರುವ ಅಂಶ ಬಯಲಾಗಿದೆ. ಅಸಲಿ ಔಷಧದ ಬದಲು ಜೆನೆರಿಕ್ ಔಷಧವನ್ನು ಶೀಷೆಗಳಲ್ಲಿ ತುಂಬಿ ಅಸಲಿ ಔಷಧ ಹೆಸರಿನ ಲೇಬಲ್ಗಳನ್ನು ಆರೋಪಿಗಳು ಬಳಸುತ್ತಿದ್ದರು ಎಂಬುವುದು ಗೊತ್ತಾಗಿದೆ.
ಪ್ರಮುಖವಾಗಿ ಈ ಶೀಷೆಗಳ ವಿತರಣಾ ಜಾಲವನ್ನು ಎಸ್ಐಟಿ ಪತ್ತೆಹಚ್ಚುತ್ತಿದೆ. ಆರೋಪಿಗಳು ಖರೀದಿಸಿರುವ ಔಷಧ ಪ್ರಮಾಣ, ಮಾರಾಟ ಮಾಡಿರುವ ಪ್ರಮಾಣ ಹಾಗೂ ದಾಸ್ತಾನು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಎಸ್ಐಟಿ ಸಂಗ್ರಹಿಸುತ್ತಿದ್ದು, ಪ್ರತಿಯೊಂದಕ್ಕೂ ತಾಳೆ ಹಾಕಲಾಗುತ್ತಿದೆ. ನಕಲಿ ಔಷಧಿಗಳನ್ನು ಆರೋಪಿಗಳು ಕೆಲವು ಸಂಸ್ಥೆಗಳಿಗೆ ಮಾರಾಟ ಮಾಡಿದ್ದು, ಆ ಸಂಸ್ಥೆಗಳು ಬೇರೆ ಯಾರ್ಯಾರಿಗೆ ಪೂರೈಸಿದೆ ಎಂಬುವುದರ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಔಷಧಿ ವಿತರಣಾ ಜಾಲದ ಪ್ರತಿಯೊಂದು ಹಂತವನ್ನು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದಾರೆ.
ಹೆಚ್ಚಿನ ಬೆಲೆಗೆ ಮಾರಾಟ
ಗಂಭೀರ ಬ್ಯಾಕ್ಟೀರಿಯಾ ಸೋಂಕುಗಳ ಚಿಕಿತ್ಸೆಗೆ ಬಳಸುವ ಔಷಧಗಳ ಒಂದು ಶೀಷೆಗೆ 6 ರಿಂದ 6,500 ರೂ.ಇದೆ. ಆರೋಪಿಗಳು ಕಡಿಮೆ ವೆಚ್ಚದಲ್ಲಿ ನಕಲಿ ಔಷಧಿ ತಯಾರಿಕೆಗೆ ಬೇಕಾಗುವ ಸಾಮಾಗ್ರಿಗಳನ್ನು ಹೈದರಾಬಾದ್,ಚೆನ್ನೈ, ಉತ್ತರಾಖಂಡ್ ಅಲ್ಲದೇ ವಿವಿಧ ರಾಜ್ಯಗಳಿಂದ ಖರೀದಿಸಿ ಅವುಗಳನ್ನು ಬ್ರ್ಯಾಂಡೆಡ್ ಔಷಧಿಗಳಂತೆ ಬಿಂಬಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ 10 ಕೋಟಿಗೂ ಅಧಿಕ ಲಾಭ ಗಳಿಸಿರುವ ಶಂಕೆ ವ್ಯಕ್ತವಾಗಿದೆ.
ನಕಲಿ ಔಷಧಿಗಳನ್ನು ಶೀಷೆಗಳಲ್ಲಿ ತುಂಬಿ ಫೈಜರ್ ಉತ್ಪನ್ನಗಳೆಂದು ಲೇಬಲ್ ಮಾಡಿ ಡಿಎಂ ಫಾರ್ಮಾ ಸಂಸ್ಥೆ ಮೂಲಕ ವಿತರಿಸಲಾಗುತ್ತಿತ್ತು.ಈ ಸಂಸ್ಥೆ ಚೆನ್ನೈನ ಬಾಲಸುಬ್ರಮಣಿ ಹಾಗೂ ಶಿವಮೊಗ್ಗ ಮೂಲದ ಪ್ರಮುಖ ಆರೋಪಿ ಪ್ರಶಾಂತ್ ಬಾಬು ಪತ್ನಿ ಪ್ರಿಯಾಂಕಾ ಹೆಸರಿನಲ್ಲಿ ನೋಂದಣಿಯಾಗಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಈ ಔಷಧಿಗಳನ್ನು ವೀರೇಶ್ಕುಮಾರ್ ಜೈನ್ ಮಾಲೀಕತ್ವದ ಕೃಪಾ ಫಾರ್ಮಾಗೆ ಪೂರೈಸಲಾಗುತ್ತಿತ್ತು. ಬಳಿಕ ಇಲ್ಲಿಂದ ಇತರೆ ಔಷಧ ಕಂಪನಿಗಳು, ಆಸ್ಪತ್ರೆಗಳಿಗೆ ಅನುಮಾನ ಬಾರದಂತೆ ಅಸಲಿ ಔಷಧಿಗಳ ಜೊತೆಗೆ ನಕಲಿ ಔಷಧಿಗಳನ್ನು ಆರೋಪಿಗಳು ಪೂರೈಸುತ್ತಿದ್ದರು ಎಂಬುವುದು ಇದುವರೆಗಿನ ತನಿಖೆಯಿಂದ ಬಯಲಾಗಿದೆ.
ಈ ಪ್ರಕರಣ ಕುರಿತು ಎಸ್ಐಟಿ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಸದ್ಯದ ತನಿಖೆಯಲ್ಲಿ ಕ್ಯಾನ್ಸರ್ ಔಷಧಿಗಳ ನಕಲಿ ತಯಾರಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ತನಿಖೆ ಮುಂದುವರೆದಿದೆ.ನಕಲಿ ಔಷಧಿ ತಯಾರಿಕೆಗಾಗಿ ಪ್ರಮುಖ ಆರೋಪಿ ಪ್ರಶಾಂತ್ ನಗರದ ಹೊರವಲಯದ ಬಿಡದಿ ಸಮೀಪ ಫಾರ್ಮ್ಹೌಸ್ ಬಾಡಿಗೆಗೆ ಪಡೆದು ಈ ದಂಧೆ ನಡೆಸುತ್ತಿದ್ದ.
ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಮಂದಿಯನ್ನು ಎಸ್ಐಟಿ ಬಂಧಿಸುವ ಮೂಲಕ ನಕಲಿ ಔಷಧಗಳಿಂದ ಸಂಭವಿಸಬಹುದಾದ ದೊಡ್ಡ ಪ್ರಮಾದವನ್ನು ತಪ್ಪಿಸಿದ್ದಾರೆ.
