ನವದೆಹಲಿ, ಅ. 8- ಭಾರತದಲ್ಲಿ ತಮ್ಮ ಉಪಗ್ರಹ ಇಂಟರ್ನೆಟ್ ಯೋಜನೆ ‘ಸ್ಟಾರ್ಲಿಂಕ್’ಗೆ ಕೆಲವು ಉದ್ಯಮಿಗಳು ಅಡ್ಡಿಪಡಿಸುತ್ತಿದ್ದಾರೆ ಎಂಬ ತಂತ್ರಜ್ಞಾನ ಉದ್ಯಮಿ ಎಲಾನ್ ಮಸ್ಕ್ ಅವರ ಆರೋಪವನ್ನು ಕೇಂದ್ರ ಸರ್ಕಾರ ತೀವ್ರವಾಗಿ ನಿರಾಕರಿಸಿದೆ. ಮಸ್ಕ್ ಅವರ ಹೇಳಿಕೆಗಳು ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ತಪ್ಪು ಕಲ್ಪನೆಗಳಿಂದ ಕೂಡಿವೆ ಎಂದು ಕೇಂದ್ರ ಸಂವಹನ ಸಚಿವಾಲಯ ಸ್ಪಷ್ಟಪಡಿಸಿದೆ.
ಎಲಾನ್ ಮಸ್ಕ್ ಅವರ ಕಂಪನಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುವ ‘ಡಾಡ್‌ಜ್ ಡಿಸೈನರ್’ ಎಂಬ ಎಕ್ಸ್ ಖಾತೆಯು ಭಾರತದ ಗ್ರಾಮೀಣ ಸಂಪರ್ಕದ ಕುರಿತು ಪೋಸ್ಟ್ ಮಾಡಿತ್ತು. ಭಾರತದ 11,256ಕ್ಕೂ ಹೆಚ್ಚು ಗ್ರಾಮಗಳಲ್ಲಿ ಇನ್ನೂ ಸೂಕ್ತ 4ಜಿ ಸಂಪರ್ಕವಿಲ್ಲ ಹಾಗೂ ಭಾರತ್‌ನೆಟ್ ಯೋಜನೆಯ ಮೂಲಸೌಕರ್ಯ ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ ಎಂದು ಉಲ್ಲೇಖಿಸಿ, ಭಾರತಕ್ಕೆ ಸ್ಟಾರ್ಲಿಂಕ್ ಸೇವೆಯ ಅಗತ್ಯವಿದೆ ಎಂದು ಅದರಲ್ಲಿ ಹೇಳಲಾಗಿತ್ತು.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಮಸ್ಕ್, ‘ದುರದೃಷ್ಟವಶಾತ್, ಭಾರತೀಯ ಜನರ ಮೇಲೆ ತಮ್ಮ ಏಕಸ್ವಾಮ್ಯದ ಹಿಡಿತವನ್ನು ಕಾಯ್ದುಕೊಳ್ಳಲು ಕೆಲವು ಒಲಿಗಾರ್ಚ್‌ಗಳು ನಮ್ಮನ್ನು ನಿರ್ಬಂಧಿಸುತ್ತಿದ್ದಾರೆ. ಅವರು ಯಾರೆಂದು ನೀವು ಊಹಿಸಬಹುದು. ಇದು ಭಾರತದ ಜನರ ವಿರುದ್ಧದ ಅಪರಾಧ’ ಎಂದು ಹೇಳಿದ್ದರು. ಈ ಮೂಲಕ ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ಮಸ್ಕ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಂವಹನ ಸಚಿವಾಲಯ, ಭಾರತವು ಉಪಗ್ರಹ ಸಂವಹನ ಸೇರಿದಂತೆ ಎಲ್ಲ ದೂರಸಂಪರ್ಕ ಸೇವೆಗಳಿಗೆ ನ್ಯಾಯಯುತ, ಪಾರದರ್ಶಕ ಮತ್ತು ತಾರತಮ್ಯವಿಲ್ಲದ ನಿಯಂತ್ರಣ ಚೌಕಟ್ಟನ್ನು ಜಾರಿಗೆ ತಂದಿದೆ ಎಂದು ತಿಳಿಸಿದೆ. ಕಕ್ಷೆ ಆಧಾರಿತ ಉಪಗ್ರಹ ಸಂವಹನಕ್ಕಾಗಿ ಸರ್ಕಾರವು ಮೂರು ಜಾಗತಿಕ ಜಿಎಂಪಿಸಿಎಸ್ ಸೇವಾ ಪೂರೈಕೆದಾರರಿಗೆ ದೂರಸಂಪರ್ಕ ಪರವಾನಗಿ ನೀಡಿದೆ. ಪ್ರಸ್ತುತ ಸ್ಟಾರ್ಲಿಂಕ್ ಸೇರಿದಂತೆ ಈ ಮೂರೂ ಸಂಸ್ಥೆಗಳು ಒಂದೇ ನಿಯಂತ್ರಣ ಹಂತದಲ್ಲಿವೆ ಎಂದು ಸಚಿವಾಲಯ ಹೇಳಿದೆ.
ನಿಯಮಗಳ ಪ್ರಕಾರ, ಪ್ರತಿಯೊಬ್ಬ ಪರವಾನಗಿದಾರರು ಬಳಕೆದಾರರ ಡೇಟಾ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ. ಈ ಭದ್ರತಾ ಮೌಲ್ಯಮಾಪನ ಪ್ರಕ್ರಿಯೆಯು ಮೂರೂ ಸಂಸ್ಥೆಗಳಿಗೆ ಪ್ರಸ್ತುತ ಚಾಲ್ತಿಯಲ್ಲಿದೆ.
ಭದ್ರತಾ ತಪಾಸಣೆ ಪೂರ್ಣಗೊಂಡ ನಂತರವಷ್ಟೇ ಸಂಬಂಧಿತ ಸಂಸ್ಥೆಗೆ ಸ್ಪೆಕ್ಟ್ರಮ್ ನಿಯೋಜನೆ ಕೋರುವ ಮುಂದಿನ ಹಂತಕ್ಕೆ ಅವಕಾಶ ದೊರೆಯಲಿದೆ. ಯಾರಿಗೂ ವಿಶೇಷ ಆದ್ಯತೆ ನೀಡದೆ ಎಲ್ಲರಿಗೂ ಒಂದೇ ರೀತಿಯ ಭದ್ರತಾ ಮತ್ತು ನಿಯಂತ್ರಣ ನಿಯಮಗಳನ್ನು ಅನ್ವಯಿಸಲಾಗುತ್ತಿದೆ. ಆದ್ದರಿಂದ ಮಾರುಕಟ್ಟೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸರ್ಕಾರ ತಿಳಿಸಿದೆ.
ಮಸ್ಕ್ ಹೇಳಿದ್ದೇನು?
ಭಾರತದ 11,000ಕ್ಕೂ ಹೆಚ್ಚು ಗ್ರಾಮಗಳಲ್ಲಿ ಇನ್ನೂ 4ಜಿ ಮೊಬೈಲ್ ಸಂಪರ್ಕ ಲಭ್ಯವಿಲ್ಲ ಎಂಬ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮಸ್ಕ್, ತಮ್ಮ ಕಂಪನಿಯ ಸೇವೆಯನ್ನು ‘ಕೆಲವು ಒಲಿಗಾರ್ಚ್‌ಗಳು’ ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಭಾರತದ ಜನರ ಮೇಲೆ ತಮ್ಮ ಏಕಸ್ವಾಮ್ಯದ ಹಿಡಿತವನ್ನು ಉಳಿಸಿಕೊಳ್ಳಲು ಈ ಅಡ್ಡಿ ಮಾಡಲಾಗುತ್ತಿದೆ ಎಂದು ಹೇಳಿದ್ದ ಅವರು, ಇದನ್ನು ‘ಭಾರತೀಯ ಜನರ ವಿರುದ್ಧದ ಅಪರಾಧ’ ಎಂಬ ಅರ್ಥದಲ್ಲಿ ಟೀಕಿಸಿದ್ದರು. ಆದರೆ ಯಾವುದೇ ವ್ಯಕ್ತಿ ಅಥವಾ ಟೆಲಿಕಾಂ ಕಂಪನಿಯ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ.
ಮಸ್ಕ್ ಪ್ರತಿಕ್ರಿಯಿಸಿದ ಪೋಸ್ಟ್‌ನಲ್ಲಿ, 2026ರ ಮೇ ವೇಳೆಗೆ 11,256 ಗ್ರಾಮಗಳಲ್ಲಿ 4ಜಿ ವ್ಯಾಪ್ತಿ ಇರಲಿಲ್ಲ ಎಂದು ಹೇಳಲಾಗಿತ್ತು. ಇದೇ ಪೋಸ್ಟ್‌ನಲ್ಲಿ ಭಾರತ್‌ನೆಟ್ 8.5 ಲಕ್ಷಕ್ಕೂ ಹೆಚ್ಚು ರೂಟ್ ಕಿ.ಮೀ. ಫೈಬರ್ ಹಾಕಿದ್ದು, ಸುಮಾರು 2.21 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಸೇವೆಗೆ ಸಿದ್ಧಗೊಳಿಸಿದ್ದರೂ, 2026ರ ಜೂನ್‌ನಲ್ಲಿ ಕೇವಲ 80,472 ಗ್ರಾಮ ಪಂಚಾಯಿತಿಗಳಲ್ಲಿ ಪಾಯಿಂಟ್ಸ್ ಆಫ್ ಪ್ರೆಸೆನ್ಸ್ ಕಾರ್ಯನಿರ್ವಹಿಸುತ್ತಿದ್ದವು ಎಂದು ಉಲ್ಲೇಖಿಸಲಾಗಿತ್ತು.
