Homeರಾಜ್ಯಡಿಜಿಟಲ್‌ ಅರೆಸ್ಟ್‌‍ ಹೆಸರಿನಲ್ಲಿ ಮಂಗಳೂರು ಮಹಿಳೆಗೆ ರೂ.2 ಕೋಟಿ ವಂಚನೆ

ಡಿಜಿಟಲ್‌ ಅರೆಸ್ಟ್‌‍ ಹೆಸರಿನಲ್ಲಿ ಮಂಗಳೂರು ಮಹಿಳೆಗೆ ರೂ.2 ಕೋಟಿ ವಂಚನೆ

ಮಂಗಳೂರು, ಅ. 8- ಪೊಲೀಸ್‌ ಹಾಗೂ ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತರು ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 75 ವರ್ಷದ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ ಹಂತ ಹಂತವಾಗಿ ಒಟ್ಟು ರೂ.2 ಕೋಟಿ ದೋಚಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಳೆದ ಸೆ. 25ರಂದು ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಗೆ ಕರೆ ಮಾಡಿ, ತಾನು ಮುಂಬೈ ಕೊಲಾಬಾ ಪೊಲೀಸ್‌ ಅಧಿಕಾರಿ ಸಂದೀಪ್‌ ರಾವ್‌ ಎಂದು ಪರಿಚಯಿಸಿಕೊಂಡಿದ್ದಾನೆ.

ಅಂತಾರಾಷ್ಟ್ರೀಯ ಹಣ ಅಕ್ರಮ ವರ್ಗಾವಣೆ ಆರೋಪಿ ನರೇಶ್‌ ಗೋಯಲ್‌ ಜತೆ ಹಣ ವರ್ಗಾವಣೆ, ಮಾದಕವಸ್ತು ವ್ಯವಹಾರ ಹಾಗೂ ಮಕ್ಕಳ ಕಳ್ಳಸಾಗಣೆ ಸೇರಿದಂತೆ ಹಲವು ಅಪರಾಧಗಳಲ್ಲಿ ಮಹಿಳೆ ಭಾಗಿಯಾಗಿರುವುದಾಗಿ ಆರೋಪಿಸಿ, ಈ ಕುರಿತು ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದಾನೆ.

ಬಳಿಕ ಮತ್ತೊಂದು ಮೊಬೈಲ್‌ ಸಂಖ್ಯೆಯಿಂದ ವಾಟ್ಸ್‌ಆ್ಯಪ್‌ ವಿಡಿಯೊ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಸಿಬಿಐ ಅಧಿಕಾರಿ ಸಮಾಧಾನ್‌ ಪವಾರ್‌ ಎಂದು ಪರಿಚಯಿಸಿಕೊಂಡಿದ್ದಾನೆ. ಮಹಿಳೆ ಅಂತಾರಾಷ್ಟ್ರೀಯ ಅಪರಾಧದಲ್ಲಿ ಭಾಗಿಯಾಗಿದ್ದು, ‘ನ್ಯಾಷನಲ್‌ ಸೀಕ್ರೆಸಿ ಆ್ಯಕ್ಟ್‌’ ಪಾಲಿಸಬೇಕು. ತಾವು ಸರ್ವೇಲೆನ್ಸ್‌ನಲ್ಲಿರುವುದರಿಂದ ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದು ಬೆದರಿಸಿದ್ದಾನೆ.

ಆಸ್ತಿ ಹಾಗೂ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿ ಎರಡು ದಿನಗಳಲ್ಲಿ ಕ್ಲಿಯರೆನ್ಸ್‌ ನೀಡುವುದಾಗಿ ನಂಬಿಸಿದ ಆರೋಪಿಗಳು, ಮಹಿಳೆಯಿಂದ ಖಾತೆ ಹಾಗೂ ಆಸ್ತಿ ವಿವರಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ತಮ್ಮ ಸೂಚನೆಯಂತೆ ನಿರ್ದಿಷ್ಟ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಅದರಂತೆ ಮಹಿಳೆ ಸೆ. 25ರಿಂದ ಅ. 5ರವರೆಗೆ ಹಂತ ಹಂತವಾಗಿ ಒಟ್ಟು ರೂ.2 ಕೋಟಿ ಆರ್‌ಟಿಜಿಎಸ್‌ ಮೂಲಕ ವರ್ಗಾಯಿಸಿದ್ದಾರೆ. ಇದರಲ್ಲಿ ರೂ.60 ಲಕ್ಷ ಹಾಗೂ ಅ. 3ರಂದು ರೂ.1.40 ಕೋಟಿ ವರ್ಗಾವಣೆ ಸೇರಿದೆ.

ವಂಚನೆಗೊಳಗಾಗಿರುವುದು ಗೊತ್ತಾದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ ‘ಗೋಲ್ಡನ್‌ ಅವರ್‌’ನಲ್ಲಿ ಹಣವನ್ನು ತಡೆಹಿಡಿಯುವ ಸಾಧ್ಯತೆ ಇರುತ್ತದೆ. ತಡವಾಗಿ ದೂರು ನೀಡಿದರೆ ಹಣವನ್ನು ವಾಪಸ್‌ ಪಡೆಯುವುದು ಕಷ್ಟವಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸೈಬರ್‌ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES
spot_img

Latest News