ಬೆಂಗಳೂರು, ಅ. 8- ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ ಮುಂಬಾಳು ಗ್ರಾಮದಲ್ಲಿ ಇಂದು ಮುಂಜಾನೆ ಖಾಸಗಿ ಸ್ಲೀಪರ್ ಬಸ್ ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಬೆಂಗಳೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ಸ್ಲೀಪರ್ ಬಸ್ನಲ್ಲಿ ಇಂದು ಮುಂಜಾನೆ 5.45ರ ಸುಮಾರಿಗೆ ಮುಂಬಾಳು ಗ್ರಾಮದ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿ ಇಡೀ ಬಸ್ಗೆ ವ್ಯಾಪಿಸಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಬಸ್ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಹಾಗೂ ಕ್ಲೀನರ್ ಬಸ್ನಲ್ಲಿದ್ದ ಸಾಗರಕ್ಕೆ ತೆರಳುತ್ತಿದ್ದ ಇಬ್ಬರು ಪ್ರಯಾಣಿಕರನ್ನು ತಕ್ಷಣವೇ ಕೆಳಗಿಳಿಸಿದ್ದಾರೆ.ಬಹುತೇಕ ಪ್ರಯಾಣಿಕರು ಶಿವಮೊಗ್ಗ ಹಾಗೂ ಅದರ ಹಿಂದಿನ ನಿಲ್ದಾಣಗಳಲ್ಲೇ ಇಳಿದಿದ್ದರಿಂದ ಬಸ್ನಲ್ಲಿ ಸಾಗರಕ್ಕೆ ತೆರಳುತ್ತಿದ್ದ ಇಬ್ಬರು ಪ್ರಯಾಣಿಕರು ಮಾತ್ರ ಇದ್ದರು.
ಸುದ್ದಿ ತಿಳಿದು ಅನಂತಪುರ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬಸ್ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
