ಚೆನ್ನೈ, ಅ. 8 (ಪಿಟಿಐ)- ತಮಿಳುನಾಡು ಸರ್ಕಾರವು ತನ್ನ ಪ್ರಮುಖ ‘ತಾಯ್ಮಾಮನ್ ತಂಗ ಮೊತಿರಂ ತಿಟ್ಟಂ’ (ತಾಯಿಯ ಕಡೆಯ ಮಾವನಿಂದ ಚಿನ್ನದ ಉಂಗುರ ನೀಡುವ ಯೋಜನೆ) ಯೋಜನೆಯ ಅರ್ಹತಾ ಮಾನದಂಡಗಳನ್ನು ಪರಿಷ್ಕರಿಸಿದೆ.
ಪರಿಷ್ಕೃತ ನಿಯಮಗಳ ಪ್ರಕಾರ, ಮಗುವಿನ ತಾಯಿಯ ಕಡೆಯ ಅಜ್ಜ-ಅಜ್ಜಿ ತಮಿಳುನಾಡಿನ ಖಾಯಂ ನಿವಾಸಿಗಳಾಗಿದ್ದರೆ, ಮದುವೆಯ ಬಳಿಕ ರಾಜ್ಯದ ಹೊರಗೆ ನೆಲೆಸಿರುವ ತಾಯಂದಿರಿಗೆ ಜನಿಸಿದ ಮಕ್ಕಳೂ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ತಾಯಿ ಮದುವೆಯ ಬಳಿಕ ಬೇರೆ ರಾಜ್ಯದಲ್ಲಿ ವಾಸಿಸುತ್ತಿದ್ದರೂ, ತಮಿಳುನಾಡಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಶಿಶುಗಳು ಉಚಿತವಾಗಿ ಒಂದು ಗ್ರಾಂ ಚಿನ್ನದ ಉಂಗುರ ಪಡೆಯಲು ಅರ್ಹರಾಗಿರುತ್ತಾರೆ. ಈ ಪ್ರಯೋಜನ ಪಡೆಯಲು ಮಗುವಿನ ತಾಯಿಯ ಕಡೆಯ ಅಜ್ಜ-ಅಜ್ಜಿ ತಮಿಳುನಾಡಿನ ಖಾಯಂ ನಿವಾಸಿಗಳಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಮಾನ್ಯ ದಾಖಲೆಗಳನ್ನು ಕುಟುಂಬಗಳು ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೆಪ್ಟೆಂಬರ್ 28ರಂದು, ಜೂನ್ 22, 2026ರಿಂದ ಅನ್ವಯವಾಗುವಂತೆ ಈ ಯೋಜನೆಗೆ ಚಾಲನೆ ನೀಡಿದ್ದರು. ಆರಂಭದಲ್ಲಿ ಮಗುವಿಗೆ ಜನ್ಮ ನೀಡುವ ತಾಯಿ ತಮಿಳುನಾಡಿನ ಖಾಯಂ ನಿವಾಸಿಯಾಗಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು.
ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಮದುವೆಯ ನಂತರ ತಮಿಳುನಾಡಿನಿಂದ ಹೊರಗೆ ನೆಲೆಸಿದ್ದ ಮಹಿಳೆಯರು ಹೆರಿಗೆಗಾಗಿ ತಮ್ಮ ತವರು ಮನೆಗೆ ಮರಳಿದರೂ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗದ ಸಂದರ್ಭಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ಮಾರ್ಗಸೂಚಿಗಳು ಜೂನ್ 22, 2026ರಿಂದಲೇ ಅನ್ವಯವಾಗಲಿವೆ.
