Homeಅಂತಾರಾಷ್ಟ್ರೀಯಸೌದಿ ವಿಮಾನ ನಿಲ್ದಾಣಗಳ ಮೇಲೆ ಹೌತಿ ಬಂಡುಕೋರರ ದಾಳಿ: ಮೂವರು ಸಾವು

ಸೌದಿ ವಿಮಾನ ನಿಲ್ದಾಣಗಳ ಮೇಲೆ ಹೌತಿ ಬಂಡುಕೋರರ ದಾಳಿ: ಮೂವರು ಸಾವು

ರಿಯಾದ್‌, ಅ. 8- ಯೆಮೆನ್‌ ಗಡಿ ದಾಟಿ ಸೌದಿ ಅರೇಬಿಯಾದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಎರಡು ದಿನಗಳಲ್ಲಿ ದೇಶದ ಎರಡು ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 36 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಬ್ಹಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 28 ಮಂದಿ ಗಾಯಗೊಂಡಿದ್ದಾರೆ ಎಂದು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಮೃತರಲ್ಲಿ ಮೊರಾಕ್ಕೊ ಮತ್ತು ಅಲ್ಜೀರಿಯಾ ರಾಷ್ಟ್ರೀಯತೆಯ ಇಬ್ಬರು ಮಹಿಳೆಯರು ಸೇರಿದ್ದಾರೆ.

ರಿಯಾದ್‌ನ ಕಿಂಗ್‌ ಖಾಲಿದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ಸುಡಾನ್‌ ರಾಷ್ಟ್ರೀಯತೆಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು ಇರಾನ್‌ ಬೆಂಬಲಿತ ಹೌತಿ ಬಂಡುಕೋರರು ಹೊತ್ತುಕೊಂಡಿದ್ದಾರೆ. ಹೌತಿ ಸೇನಾ ವಕ್ತಾರ ಯಾಹ್ಯಾ ಸಾರಿ, ಬ್ಯಾಲಿಸ್ಟಿಕ್‌ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಸೌದಿ ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದ್ದಾರೆ.

ಸೌದಿ ಅರೇಬಿಯಾ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.ಇದೇ ವೇಳೆ, ಯೆಮೆನ್‌ನ ಅಡೆನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಯೆಮೆನ್‌ನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಹೌತಿಗಳು ಕೆಂಪು ಸಮುದ್ರದ ಪ್ರಮುಖ ಕರಾವಳಿ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ. ಜಾಗತಿಕ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಬಾಬ್‌ ಅಲ್‌-ಮಂದಬ್‌ ಜಲಸಂಧಿಯ ಬಳಿಯ ಮೊಖಾ ಬಂದರೂ ಇದರಲ್ಲಿ ಸೇರಿದೆ.

RELATED ARTICLES
spot_img

Latest News