ಬೆಂಗಳೂರು,ಮಾ.29-ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ. ಆದರೆ ಸಂಘಟನಾತ್ಮಕ ಎಲ್ಲಾ ಜವಾಬ್ದಾರಿಗಳಿಗೂ ರಾಜೀನಾಮೆ ನೀಡುತ್ತೇನೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದರ ಬಗ್ಗೆ ಎರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಕ್ರೀನಿಂಗ್ ಕಮಿಟಿವರೆಗೂ ನನ್ನ ಹೆಸರಿತ್ತು. ಅಜಯ್ಕುಮಾರ್ ಸರ್ನಾಯಕ್ ಮತ್ತು ನನ್ನ ಹೆಸರಿಗೆ ಮಾತ್ರ ಬೆಂಬಲ ನೀಡಿದ್ದಾಗಿ ಜಿಲ್ಲೆಯ ಶಾಸಕರು ತಿಳಿಸಿದ್ದರು. ಆದರೆ ಹೈಕಮಾಂಡ್ನ ಸಭೆಗೆ ನನ್ನ ಹೆಸರು ಹೋಗಿಲ್ಲ. ಇದರ ಹಿಂದೆ ಷಡ್ಯಂತ್ರ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ಎಂದು ಆರೋಪಿಸಿದರು.
ಪಂಚಮಸಾಲಿ ಸಮುದಾಯದ ಹೆಣ್ಣುಮಗಳು ಪ್ರಬಲವಾಗಿ ಬೆಳೆಯುವುದನ್ನು ಕೆಲವರಿಗೆ ಸಹಿಸಿಕೊಳ್ಳಲಾಗಿಲ್ಲ. ಕಾಂಗ್ರೆಸ್ನ ಘೋಷಿತ ಅಭ್ಯರ್ಥಿ ಸಂಯುಕ್ತ ಪಾಟೀಲ್ ನೆರೆಯ ಬಿಜಾಪುರ ಜಿಲ್ಲೆಯವರು. ಆಕೆಯ ಗಂಡನ ಮನೆ ಬೀದರ್. ಅಲ್ಲಿಂದ ಬೇಕಾದರೆ ಸ್ಪರ್ಧಿಸಬಹುದಿತ್ತು. ಬಾಗಲಕೋಟೆಗೆ ಬಂದು ಸ್ಪರ್ಧೆ ಮಾಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
ನಿನ್ನೆ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವೀಣಾ ಕಾಶಪ್ಪನವರ್ ಅವರಿಗೆ ವಿಧಾನಪರಿಷತ್ ಸದಸ್ಯತ್ವ ಅಥವಾ ವಿಧಾನಸಭೆಯ ಯಾವುದಾದರೂ ಕ್ಷೇತ್ರವನ್ನು ನಿಗದಿ ಮಾಡುವಂತೆ ಜಿಲ್ಲೆಯ ಹಿರಿಯ ನಾಯಕರೊಬ್ಬರು ಕೈಮುಗಿದು ಕೇಳಿಕೊಂಡರು.
ಆದರೆ ಅದಕ್ಕೆ ಒಪ್ಪದ ನಾಯಕರು ಮೊದಲು ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲಿ. ಅಲ್ಲಿವರೆಗೂ ಯಾವುದೇ ಸ್ಥಾನಮಾನವಿಲ್ಲ ಎಂದಿದ್ದಾರೆ. ಅಲ್ಲಿಗೆ ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಸಮರ್ಥಳು. ಯಾವ ಸ್ಥಾನಮಾನಕ್ಕೂ ಅರ್ಹಳಲ್ಲ ಎಂಬ ಭಾವನೆ ಮೂಡಿದಂತಾಗಿದೆ. ಈ ಬೆಳವಣಿಗೆಯಿಂದ ಮನಸ್ಸಿಗೆ ನೋವಾಗಿದ್ದು, ಆರೋಗ್ಯ ಹದಗೆಟ್ಟಿದೆ.
ಎರಡು ದಿನಗಳ ಕಾಲ ವಿಶ್ರಾಂತಿ ಪಡೆದು ನಂತರ ಬಾಗಲಕೋಟೆಗೆ ಹೋಗಿ ಸ್ಥಳೀಯ ನಾಯಕರು ಹಾಗೂ ಬೆಂಬಲಿಗರ ಜೊತೆ ಚರ್ಚೆ ಮಾಡುತ್ತೇನೆಂದು ಹೇಳಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿದ್ದೇನೆ. ಆ ಸ್ಥಾನಗಳಿಗೆ ರಾಜೀನಾಮೆ ನೀಡುತ್ತೇನೆ. ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲಿದ್ದು, ಕುಟುಂಬದ ಫೌಂಡೇಶನ್ನಿಂದ ಸಮಾಜಸೇವೆಯನ್ನು ಮುಂದುವರೆಸುವುದಾಗಿ ಸ್ಪಷ್ಟಪಡಿಸಿದರು.
ಸಂಯುಕ್ತ ಪಾಟೀಲ್ ಈ ಹಿಂದಿನ ಚುನಾವಣೆಯಲ್ಲಿ ಸ್ರ್ಪಸಲು ಮುಂದೆ ಬಂದಿರಲಿಲ್ಲ. ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ. ಜಿಲ್ಲೆಯಲ್ಲಿ 5 ಮಂದಿ ಶಾಸಕರಿದ್ದಾರೆ ಎಂಬ ಕಾರಣಕ್ಕೆ ಚುನಾವಣೆಗೆ ನಿಲ್ಲುತ್ತಿದ್ದಾರೆ. ನಾನು ಚುನಾವಣೆಯಲ್ಲಿ ತಟಸ್ಥಳಾಗಿರುತ್ತೇನೆ ಎಂದು ಹೇಳಿದರು.