ಮುಂಬೈ, ಅ. 11 (ಪಿಟಿಐ): ಕಾಕ್ರೋಚ್ ಜನತಾ ಪಾರ್ಟಿಯ ಬೆಂಬಲವಾಗಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ನಟ ಇಮ್ರಾನ್ ಖಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮಾಜಿ ಸಂಸದ ಕಿರಿತ್ ಸೋಮಯ್ಯ ಮುಂಬೈ ಪೊಲೀಸರನ್ನು ಒತ್ತಾಯಿಸಿದ್ದಾರೆ.ಖಾನ್ ವಿದೇಶಿ ಪ್ರಜೆಯಾಗಿದ್ದರೂ ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸಬಹುದೇ ಎಂದು ಅವರು ಎಕ್್ಸನಲ್ಲಿ ಸ್ಪಷ್ಟನೆ ಕೋರಿದ್ದಾರೆ.ನಟನನ್ನು ತಕ್ಷಣವೇ ಗಡೀಪಾರು ಮಾಡಬೇಕು ಎಂದೂ ಸೋಮಯ್ಯ ಹೇಳಿದ್ದಾರೆ.
ನಿನ್ನೆ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಪೊಲೀಸರು ವಶಕ್ಕೆ ಪಡೆದ ಪ್ರತಿಭಟನಾಕಾರರಲ್ಲಿ ಖಾನ್ ಕೂಡ ಒಬ್ಬರಾಗಿದ್ದರು. ಮುಂಬೈ ಜಂಟಿ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ಶರ್ಮಾ ಅವರಿಗೆ ಬರೆದ ಪತ್ರದಲ್ಲಿ, ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಖಾನ್ಗೆ ಕಾನೂನುಬದ್ಧ ಅನುಮತಿ ಇದೆಯೇ ಎಂದು ಸೋಮಯ್ಯ ಪ್ರಶ್ನಿಸಿದ್ದಾರೆ.
ಖಾನ್ ವಿದೇಶಿ ಪ್ರಜೆ ಎಂದು ಪ್ರತಿಪಾದಿಸಿದ ಬಿಜೆಪಿ ನಾಯಕ, ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಅನುಮತಿ ಪಡೆದಿದ್ದಾರೆಯೇ ಎಂದು ಕೇಳಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ವಿಷಯದ ಕುರಿತು ಪ್ರತಿಕ್ರಿಯೆ ಪಡೆಯಲು ಖಾನ್ ಲಭ್ಯವಿರಲಿಲ್ಲ. ಪೊಲೀಸ್ ವ್ಯಾನ್ನಲ್ಲಿದ್ದಾಗ ನಟ ಸಾಮಾಜಿಕ ಜಾಲತಾಣವೊಂದರಲ್ಲಿ, ನಾನು ವಾಹನದಲ್ಲಿ ಹೊರಟಿದ್ದೇನೆ (ಡ್ರೈವ್ಗೆ ಹೋಗುತ್ತಿದ್ದೇನೆ) ಎಂದು ತೋರುತ್ತಿದೆ ಎಂದು ಪೋಸ್ಟ್ ಮಾಡಿದ್ದರು.
ನಂತರ ಒಂದು ವಿಡಿಯೋ ಹೊರಬಂದಿದ್ದು, ಅದರಲ್ಲಿ ಪೊಲೀಸ್ ವಾಹನಕ್ಕೆ ಬಲವಂತವಾಗಿ ಹತ್ತಿಸುವಾಗ, ಪ್ರತಿಭಟನೆಯಲ್ಲಿ ಭಾಗವಹಿಸಿದ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಖಾನ್ ಪ್ರತಿಕ್ರಿಯಿಸುತ್ತಿರುವುದು ಕಂಡುಬಂದಿದೆ. ನನ್ನ ಯಾವುದೇ ಬೇಡಿಕೆಗಳಿಲ್ಲ. ನಾನು ಯಾವುದೇ ಸಂಘಟನೆಯ ಭಾಗವಲ್ಲ ಎಂದು ಅವರು ಹೇಳಿದ್ದಾರೆ. ಖಾನ್ ಪೊಲೀಸರನ್ನುದ್ದೇಶಿಸಿ, ನಾನೇನು ಮಾಡಿದ್ದೇನೆ? ನನ್ನನ್ನು ಏಕೆ ಹೀಗೆ ಬಲವಂತವಾಗಿ ಎಳೆದಾಡಲಾಗುತ್ತಿದೆ? ಎಂದು ಕೇಳುತ್ತಿರುವುದು ಕೂಡ ಕಂಡುಬಂದಿದೆ.
ಅಭೂತಪೂರ್ವ ಭದ್ರತಾ ಬಿಗಿ ಕ್ರಮಗಳು ಮತ್ತು ಕಾಕ್ರೋಚ್ ಜನತಾ ಪಾರ್ಟಿಯ ನಾಯಕ ಅಭಿಜಿತ್ ದಿಪ್ಕೆ, ನಾಲ್ವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಯೂಟ್ಯೂಬರ್ ಧ್ರುವ್ ರಾಥೀ ಸೇರಿದಂತೆ 7,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಕ್ರಮವು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶನಿವಾರ ಜಂತರ್ ಮಂತರ್ನಲ್ಲಿ ನಡೆಯಬೇಕಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ತಡೆಯಲು ಸರ್ಕಾರಕ್ಕೆ ನೆರವಾಯಿತು.
