ನವದೆಹಲಿ, ನ.25 (ಪಿಟಿಐ)- ಕೇಂದ್ರ ಸರ್ಕಾರವು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರಿಗೆ ದೆಹಲಿಯ ಲ್ಯೂಟಿಯನ್ಸ್ ಪ್ರದೇಶದಲ್ಲಿ ಬಂಗಲೆಯೊಂದನ್ನು ಮಂಜೂರು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ಪಂಡಿತ್ ರವಿಶಂಕರ್ ಶುಕ್ಲಾ ಲೇನ್ನಲ್ಲಿರುವ ಬಂಗಲೆಯನ್ನು ದಲೈ ಲಾಮಾ ಅವರಿಗೆ ನೀಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕೋರಿಕೆಯ ಮೇರೆಗೆ, ದಲೈ ಲಾಮಾ ಅವರ ಕಾರ್ಯಾಲಯವಾದ ಗಾಡೆನ್ ಫೋಡ್ರಾಂಗ್ ಟ್ರಸ್ಟ್ಗೆ ಸೇರಿದ ಈ ಬಂಗಲೆಯನ್ನು ಮಂಜೂರು ಮಾಡಲಾಗಿದೆ ಎಂದು ಅವು ತಿಳಿಸಿವೆ. ಸಾಮಾನ್ಯವಾಗಿ ಇಂತಹ ವಸತಿ ಸೌಕರ್ಯವನ್ನು ಮೂರು ವರ್ಷಗಳ ಅವಧಿಗೆ ನೀಡಲಾಗುತ್ತದೆ. ಅಗತ್ಯವಿದ್ದಲ್ಲಿ ಈ ಅವಧಿಯನ್ನು ವಿಸ್ತರಿಸಲು ಅವಕಾಶವಿರುತ್ತದೆ.
ಗಾಡೆನ್ ಫೋಡ್ರಾಂಗ್ ಟ್ರಸ್ಟ್ನ ವೆಬ್ಸೈಟ್ ಪ್ರಕಾರ, ದಲೈ ಲಾಮಾ ಅವರ ಸಂಸ್ಥೆ ಹಾಗೂ ಅವರ ಆಧ್ಯಾತ್ಮಿಕ ಕಾರ್ಯಗಳನ್ನು ಸಂರಕ್ಷಿಸಲು ಮತ್ತು ಎತ್ತಿಹಿಡಿಯಲು, ಹಾಗೆಯೇ ಅವರ ಮಾನವೀಯ ದೃಷ್ಟಿಕೋನವನ್ನು ಮುನ್ನಡೆಸಲು ಈ ಟ್ರಸ್ಟ್ ಸಮರ್ಪಿತವಾಗಿದೆ.
ಮಾನವ ಮೌಲ್ಯಗಳನ್ನು ಉತ್ತೇಜಿಸುವುದು, ವಿವಿಧ ಧರ್ಮಗಳ ನಡುವೆ ಸಾಮರಸ್ಯವನ್ನು ಬೆಳೆಸುವುದು, ಟಿಬೆಟಿಯನ್ ಸಂಸ್ಕೃತಿ ಮತ್ತು ಅಸ್ತಿತ್ವವನ್ನು ಸಂರಕ್ಷಿಸುವುದು, ಪರಿಸರವನ್ನು ರಕ್ಷಿಸುವುದು ಹಾಗೂ ಪ್ರಾಚೀನ ಭಾರತೀಯ ಜ್ಞಾನದ ಬಗ್ಗೆ ಆಳವಾದ ತಿಳುವಳಿಕೆಯನ್ನು ಪ್ರೋತ್ಸಾಹಿಸುವುದು ಮುಂತಾದ ದಲೈ ಲಾಮಾ ಅವರ ಪ್ರಮುಖ ಬದ್ಧತೆಗಳಿಗೆ ಈ ಟ್ರಸ್ಟ್ ಬೆಂಬಲ ನೀಡುತ್ತದೆ ಎಂದು ವೆಬ್ಸೈಟ್ ತಿಳಿಸಿದೆ.
